ಮೈಸೂರಿನಲ್ಲಿ ಇನ್ನು ಮುಂದೆ ರಾತ್ರಿಯೂ ತ್ಯಾಜ್ಯ ಸಂಗ್ರಹ…!

CAN_3680
Published on


*ಬೆಳಗ್ಗೆ ಬಡಾವಣೆ, ರಾತ್ರಿ ಬೀದಿ ಬದಿ ವ್ಯಾಪಾರಸ್ಥರಿಂದ ತ್ಯಾಜ್ಯ ಸಂಗ್ರಹ
*ರಾತ್ರಿ ವೇಳೆ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ತಂಡ ರಚನೆ
ಸದೇಶ್ ಕಾರ್ಮಾಡ್ ಮೈಸೂರು
ನಗರವನ್ನು ಶುಚಿಗೊಳಿಸಲು ಪೌರ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಲೇ ಇರುತ್ತಾರೆ. ಆದರೆ, ರಾತ್ರಿಯಾಗುತ್ತಿದ್ದಂತೆಯೇ ನಗರ ಗಬ್ಬೆದ್ದು ಹೋಗುತ್ತದೆ. ಕಾರಣ, ರಸ್ತೆ ಬದಿ ವ್ಯಾಪಾರದಿಂದ ಉತ್ಪತಿಯಾಗುವ ತ್ಯಾಜ್ಯ. ಈ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಮುಕ್ತಿ ಹಾಡಲು ನಗರ ಪಾಲಿಕೆ ಮುಂದಾಗಿದೆ.

ನಗರದ ಹಲವಾರು ಕಡೆಗಳಲ್ಲಿ ರಾತ್ರಿ ರಸ್ತೆ ಬದಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತದೆ. ಆದರೆ, ವ್ಯಾಪಾರ ವಹಿವಾಟು ಮುಕ್ತಾಯಗೊಂಡ ನಂತರ ಉತ್ಪತಿಯಾಗುವ ತ್ಯಾಜ್ಯವನ್ನು ವರ್ತಕರು ಮನಬಂದಲ್ಲಿ ವಿಲೇವಾರಿ ಮಾಡುತ್ತಿರುವುದು ಕಂಡು ಬರುತ್ತಿದೆ. ಬೀದಿ ಬದಿ ವ್ಯಾಪಾರಸ್ಥರು ಎಲ್ಲೆಂದರಲ್ಲಿ ತಾಜ್ಯ ವಿಲೇವಾರಿ ಮಾಡಲು ಪಾಲಿಕೆ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಇರುವುದು ಕೂಡ ಒಂದು ಪ್ರಮುಖ ಕಾರಣವಾಗಿದೆ. ಈ ಸಮಸ್ಯೆಯನ್ನು ಮನಗಂಡ ನಗರ ಪಾಲಿಕೆಯು ರಾತ್ರಿ ರಸ್ತೆ ಬದಿ ವ್ಯಾಪಾರದಿಂದ ಉತ್ಪತಿಯಾಗುವ ತ್ಯಾಜ್ಯ ಸಂಗ್ರಹಿಸಲು ಹಾಗೂ ವಿಲೇವಾರಿ ಮಾಡಲು ಪ್ರತ್ಯೇಕ ತಂಡ ರಚಿಸಲು ಮುಂದಾಗಿದೆ.

ಪ್ರತ್ಯೇಕ ತಂಡ ರಚನೆ: ರಸ್ತೆ ಬದಿ ವ್ಯಾಪಾರಿಗಳಿಂದ ತ್ಯಾಜ್ಯ ಸಂಗ್ರಹಿಸಲು ವಲಯವಾರು ತಂಡಗಳನ್ನು ನಗರ ಪಾಲಿಕೆ ರಚಿಸಲಿದೆ. ಈ ತಂಡದವರು ನಿಗದಿ ಪಡಿಸಿದ ಸಮಯದಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವವರ ಬಳಿ ತೆರಳಿ ತ್ಯಾಜ್ಯವನ್ನು ಸಂಗ್ರಹಿಸಿ ರಾತ್ರಿಯೇ ವಿಲೇವಾರಿ ಮಾಡುತ್ತಾರೆ. ಇದಕೋಸ್ಕರ ಪೌರ ಕಾರ್ಮಿಕರನ್ನು ಪ್ರತ್ಯೇಕವಾಗಿ ನಿಯೋಜನೆ ಮಾಡಲಾಗುವುದು. ಅಲ್ಲದೆ ಪತ್ಯೇಕ ಟ್ಪಿಪರ್ ಹಾಗೂ ಲಾರಿಯನ್ನು ಖರೀದಿ ಮಾಡಲು ಪಾಲಿಕೆ ಈಗಾಗಲೇ ಟೆಂಡರ್ ಕರೆದಿದೆ. ಪೌರ ಕಾರ್ಮಿಕರು ತ್ಯಾಜ್ಯ ಸಂಗ್ರಹಿಸಲು ರಾತ್ರಿ ವೇಳೆ ವರ್ತಕರ ಬಳಿ ಬರುವ ಸಂದರ್ಭ ಅವರು ಹಸಿ ಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡಬೇಕು.
ಈ ಹಿಂದೆ ಬೀದಿ ಬದಿ ವ್ಯಾಪಾರಿಗಳು ಕಂಟೇನರ್‌ಗಳಲ್ಲಿ ತ್ಯಾಜ್ಯ ಸುರಿಯುತ್ತಿದ್ದರು. ಆದರೆ, ಮೈಸೂರು ನಗರ ಕಂಟೇನರ್ ಮುಕ್ತವಾಗಿರುವ ಹಿನ್ನೆಲೆಯಲ್ಲಿ ಇದೀಗ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿರುವುದು ಕಂಡು ಬಂದಿದೆ. ಈ ರೀತಿ ಮಾಡುವ ಬದಲು ಸದ್ಯದ ಮಟ್ಟಿಗೆ ನಿರ್ದಿಷ್ಟ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳು ಒಂದು ಪ್ಲಾಸ್ಟಿಕ್ ಡ್ರಮ್ ಇಟ್ಟುಕೊಂಡು ಅದರಲ್ಲಿ ತ್ಯಾಜ್ಯ ತುಂಬಿ ಇಟ್ಟರೆ ಬೆಳಗ್ಗೆ ಪೌರ ಕಾರ್ಮಿಕರಿಗೆ ತ್ಯಾಜ್ಯ ವಿಲೇವಾರಿ ಮಾಡಲು ಅನುಕೂಲವಾಗುತ್ತದೆ ಎಂಬುದು ನಗರ ಪಾಲಿಕೆ ಅಧಿಕಾರಿಗಳ ಸಲಹೆಯಾಗಿದೆ.

ಸ್ವಚ್ಛತೆ ಕುರಿತು ಅರಿವು: ಈಗಾಗಲೇ ನಗರ ಪಾಲಿಕೆಯ ತಂಡವೊಂದು ರಾತ್ರಿ ಗಸ್ತು ತಿರುಗುತ್ತಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಪ್ರಸ್ತುತ ದಂಡ ವಿಧಿಸುತ್ತಿಲ್ಲ. ಆದರೆ, ಮನಬಂದಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಡಿ ಎಂಬುದು ಪಾಲಿಕೆಯ ಮನವಿಯಾಗಿದೆ. ಬೀದಿ ಬದಿ ವ್ಯಾಪಾರಿಗಳಿಂದ ಇನ್ನು ಮುಂದೆ ತ್ಯಾಜ್ಯ ಸಂಗ್ರಹಿಸಲು ಪ್ರಾರಂಭಿಸಿದ ನಂತರವೂ ಸಹ ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದರೆ ದೊಡ್ಡ ಮೊತ್ತದ ದಂಡವನ್ನು ತೆರಬೇಕಾಗುತ್ತದೆ.

ಸ್ವಚ್ಛತೆಗೆ ಸಹಕರಿಸಿ: ಸಾಂಸ್ಕೃತಿಕ ನಗರಿ ಮೈಸೂರು ಸ್ವಚ್ಛತೆಯಲ್ಲಿ ಪ್ರತಿ ವರ್ಷ ದೇಶದ ಗಮನ ಸೆಳೆಯುತ್ತಿದೆ. ಪ್ರತಿ ಬಾರಿ ಒಂದಲ್ಲಾ ಒಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಿದೆ. ಆದರೆ, ಪ್ರವಾಸಿಗರು ನಗರಕ್ಕೆ ಅಗಮಿಸುವ ಸಂದರ್ಭ ತ್ಯಾಜ್ಯವನ್ನು ಕಂಡರೆ ಮೈಸೂರು ಇಷ್ಟೊಂದು ಕೊಳಗಾಗಿದೆಯೇ ಎಂದು ಭಾವಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ನಗರವನ್ನು ಶುಚಿಯಾಗಿಡಲು ವರ್ತಕರು ಹಾಗೂ ಸಾರ್ವಜನಿಕರ ಸಹಕಾರದ ಅವಶ್ಯಕತೆ ಇದೆ.

ನಗರದಲ್ಲಿ ರಾತ್ರಿ ನಡೆಯುವ ರಸ್ತೆ ಬದಿ ವ್ಯಾಪಾರದಿಂದ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಉತ್ಪತಿಯಾಗುತ್ತಿದೆ. ಆದರೆ, ಈ ತ್ಯಾಜ್ಯ ವಿಲೇವಾರಿ ನಗರ ಪಾಲಿಕೆಯಿಂದ ಇದುವರೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ವರ್ತಕರು ಎಲ್ಲೆಂದರಲ್ಲಿ ತ್ಯಾಜ್ಯವನ್ನು ಸುರಿಯುತ್ತಿರುವುದು ಕಂಡು ಬಂದಿದೆ. ಹೀಗಾಗಿ ರಾತ್ರಿ ಸಂಗ್ರಹವಾಗುವ ಕಸವನ್ನು ರಾತ್ರಿಯೇ ಸಂಗ್ರಹಿಸಲು ಪ್ರತ್ಯೇಕ ತಂಡ ರಚಿಸಲಾಗುವುದು. ಇದರಿಂದ ಇನ್ನು ಮುಂದೆ ನಗರ ಎಲ್ಲ ಹೊತ್ತಿನಲ್ಲೂ ಶುಚಿಯಿಂದ ಕೂಡಿರುತ್ತದೆ.
ಡಿ.ಜಿ. ನಾಗರಾಜ್, ನಗರ ಪಾಲಿಕೆ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net