ಸಮಾನತೆಯ ಪಾಠ ಮನೆಯಿಂದಲೇ ಪ್ರಾರಂಭವಾಗಲಿ : ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

international women's day
Published on

ಮೈಸೂರು: ಹೆಣ್ಣು, ಗಂಡು ಇಬ್ಬರೂ ಸಮಾನರು. ಮನೆಯಿಂದಲೇ ಮಕ್ಕಳಲ್ಲಿ ಈ ಸಮಾನತೆಯ ಪಾಠ ಪ್ರಾರಂಭವಾಗಬೇಕೆಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವ ವಿದ್ಯಾಲಯದ ಮಹಿಳಾ ಉದ್ಯೋಗಿಗಳ ಸಮುದಾಯ, ಮಹಿಳಾ ಅಧ್ಯಯನ ಕೇಂದ್ರ, ಮಹಿಳಾ ಸಮಸ್ಯೆಗಳನ್ನು ನಿಭಾಯಿಸುವ ವೇದಿಕೆ ಮತ್ತು ಮೈತ್ರಿ ಸಂಯುಕ್ತಾಶ್ರಯದಲ್ಲಿ ಮಾನಸಗಂಗೋತ್ರಿಯ ವಿಜ್ಞಾನಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರು ವಿದ್ಯಾವಂತರಾದರೂ ಸಹ ಹೆಣ್ಣು ಭ್ರೂಣ ಹತ್ಯೆ ನಿಂತಿಲ್ಲ. ಮಹಿಳೆಯರು ಈ ನಿಟ್ಟಿನಲ್ಲಿ ಹೆಚ್ಚರ ವಹಿಸಿ ಹೆಣ್ಣು ಭ್ರೂಣ ಹತ್ಯೆ ತಡೆಯಬೇಕು. ಹೆಣ್ಣು ಹುಟ್ಟಿನಿಂದಲೇ ಸವಾಲು ಎದುರಿಸಲು ಪ್ರಾರಂಭಿಸುತ್ತಾಳೆ. ಹೆಣ್ಣಾಗಿ ಹುಟ್ಟಿ ಬದುಕುವುದೇ ದೊಡ್ಡ ಸವಾಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಮಾತನಾಡಿ, ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ವೃದ್ಧಿಸುತ್ತಿದೆ. ಆದರೆ, ಕೆಲಸಕ್ಕೆ ಸೇರುವ ಮಹಿಳೆಯರ ಸಂಖ್ಯೆ ಮಾತ್ರ ಏರಿಕೆ ಕಾಣುತ್ತಿಲ್ಲ. ಇದು ಕೇವಲ ಭಾರತದ ಸಮಸ್ಯೆಯಲ್ಲ ಜಾಗತಿಕ ಸಮಸ್ಯೆ ಕೂಡ ಹೌದು ಎಂದರು.
ವಿಶ್ವ ಸಂಸ್ಥೆಯ ವರದಿ ಪ್ರಕಾರ ದೇಶದ ಸಂಶೋಧನಾ ಅಭಿವೃದ್ಧಿ ಸಂಸ್ಥೆಗಳಲ್ಲಿರುವ ಒಟ್ಟು 2.80 ಲಕ್ಷ ವಿಜ್ಞಾನಿಗಳು, ಇಂಜಿನಿಯರ್‌ಗಳು ಮತ್ತು ತಂತ್ರಜ್ಞರ ಪೈಕಿ ಮಹಿಳೆಯರು ಶೇ.14 ರಷ್ಟು ಮಾತ್ರ ಇದ್ದಾರೆ. ಈ ಸಂಖ್ಯೆ ವೃದ್ಧಿಯಾಗಬೇಕಾಗಿದೆ ಎಂದರು.

ವೇದಿಕೆಯಲ್ಲಿ ಜಯದೇವ ಆಸ್ಪತ್ರೆಯ ಮಕ್ಕಳ ಹೃದ್ರೋಗ ವಿಭಾಗದ ಮುಖ್ಯಸ್ಥೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ಕುಲಸಚಿವ ಪ್ರೊ. ಆರ್.ಶಿವಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net