

ದೊಡ್ಡಬಳ್ಳಾಪುರ: ಕನ್ನಡ ಸುಗಮ ಸಂಗೀತಕ್ಕೆ ಅತ್ಯುತ್ತಮ ಭಾವಗೀತೆ ನೀಡಿದವರೇ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಬಣ್ಣಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಸಾಹಿತಿಗಳ ಯಾವ ಪಂಥಕ್ಕೂ ಸೇರದ ಡಾ.ವೆಂಕಟೇಶಮೂರ್ತಿ ತಮ್ಮ ಸೃಜನಶೀಲತೆ ನಿರಂತರವಾಗಿ ಉಳಿಸಿಕೊಂಡು ಬಂದವರು. ಕಾವ್ಯ, ನಾಟಕ, ವಿಮರ್ಶೆ, ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ ಸೇರಿ ಹಲವು ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡುವ ಮೂಲಕ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದರು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕೋಶಾಧ್ಯಕ್ಷ ನಂ.ಮಹಾದೇವ ಮಾತನಾಡಿ, ವೆಂಕಟೇಶಮೂರ್ತಿ ಅವರು ಬುದ್ಧಚರಣ, ಮಹಾಕಾವ್ಯ, ಗಮಕವಾಚನ ಮತ್ತು ಗೀತಗಾಯನದ ಮೂಲಕ ಸಹೃದಯರಿಗೆ ಸುಲಭವಾಗಿ ಅರ್ಥವಾಗುತ್ತದೆ. ಮಹಾಕಾವ್ಯ ಪರಂಪರೆ ಮುಂದುವರಿಸಿದ ಕವಿ ಎಲ್ಲ ವಯೋಮಾನದ ಓದುಗರಿಗೂ ಪ್ರೀತಿ ಪಾತ್ರರಾಗಿದ್ದರು ಬಣ್ಣಿಸಿದರು.
ಜವಾಹರ್ ನವೋದಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ಮಾತನಾಡಿ, ವೆಂಕಟೇಶಮೂರ್ತಿ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸುಗಮ ಸಂಗೀತ, ಕಿರುತೆರೆ, ಸಿನಿಮಾ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಿದ್ದಾರೆ. ಐದು ಬೆರಳು ಕೂಡಿ ಹೇಗೆ ಒಂದು ಮುಷ್ಟಿಯೋ ಹಾಗೇ ಹಲವು ಮಂದಿ ಸೇರಿ ಈ ಸಮಷ್ಟಿಯು ಬೇರೆ ಬೇರೆ ಒಕ್ಕಲು ಒಂದೇ ತಾಯ ಮಕ್ಕಳು ಎಂದು ಬರೆದ ಈ ಹಾಡು ರಾಷ್ಟ್ರೀಯ ಭಾವನೆ ತೋರಿಸುತ್ತದೆ ಎಂದರು.
ಜ್ಞಾನಗಂಗಾ ಪ್ರೌಢಶಾಲೆ ಶಿಕ್ಷಕ ಕೋದಂಡರಾಮ, ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಸಾಸಲು ಹೋಬಳಿ ಘಟಕ ಅಧ್ಯಕ್ಷ ಜಿ.ಎಂ.ನಾಗರಾಜು ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ನಾಗರತ್ನಮ್ಮ, ಷಫೀರ್, ಕಲಾವಿದ ಬಾಶೆಟ್ಟಿಹಳ್ಳಿ ಮಂಜುನಾಥ್ ಇತರರು ಇದ್ದರು.
ಗಾಯಕ ಸಿ.ಅಶ್ವತ್ಥ ಮತ್ತು ಕವಿ ಎಚ್.ಎಸ್.ವೆಂಕಟೇಶಮೂರ್ತಿ ಜೋಡಿ ಕನ್ನಡ ಭಾವಗೀತೆ ಮೂಲಕ ಜನಪ್ರಿಯರಾದವರು. ಚಲನಚಿತ್ರ ಮತ್ತು ರಂಗಭೂಮಿಯೊಡನೆ ನಿರಂತರ ಸಂಪರ್ಕ ಹೊಂದಿದ್ದ ಅವರು ಚಲನಚಿತ್ರಗಳಿಗೆ ರಚಿಸಿದ ಹಾಡುಗಳು, ಸಂಭಾಷಣೆ. ದೂರದರ್ಶನ ಧಾರಾವಾಹಿಗಳ ಶೀರ್ಷಿಕೆ ಗೀತೆ, ಭಾವಗೀತೆಗಳ ಧ್ವನಿ ಸುರಳಿಗಳಿಗೆ ರಚಿಸಿದ ಹಾಡುಗಳು ಕನ್ನಡಿಗರ ಮನಗೆದ್ದಿವೆ. - ಡಿ.ಶ್ರೀಕಾಂತ್ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ