ಕನ್ನಡದ ಕಾವ್ಯ ಕ್ಷೇತ್ರ ಹಿಗ್ಗಿಸಿದವರು ಎಚ್​ಎಸ್​ವಿ: ಮಲ್ಲೇಪುರಂ ಜಿ.ವೆಂಕಟೇಶ ಅಭಿಮತ

HSV
Published on

ಬೆಂಗಳೂರು: ಹಳೆಗನ್ನಡದಲ್ಲಿ ಅಡಗಿದ್ದ ಸಾಹಿತ್ಯವನ್ನು ಹೊಸ ಕನ್ನಡಕ್ಕೆ ನಿರೂಪಣೆಯೊಂದಿಗೆ ಓದುಗರಿಗೆ ಮುಟ್ಟಿಸಿದವರು ಕವಿ ಎಚ್​.ಎಸ್​. ವೆಂಕಟೇಶಮೂರ್ತಿ ಎಂದು ಹಿರಿಯ ಸಾಹಿತಿ ಮಲ್ಲೇಪುರಂ ಜಿ. ವೆಂಕಟೇಶ ಬಣ್ಣಿಸಿದ್ದಾರೆ.

ಎನ್​.ಆರ್​. ಕಾಲನಿಯ ಸಿ. ಅಶ್ವತ್ಥ ಕಲಾ ಭವನದಲ್ಲಿ ಭಾನುವಾರ ಕಪ್ಪಣ್ಣ ಅಂಗಳ ಮತ್ತು ಸಮಂಜಸ ಬೆಂಗಳೂರು ಆಯೋಜಿಸಿದ್ದ "ಕಾವ್ಯ ಕಾಮಧೇನು ಎಚ್​ಎಸ್​ವಿ' ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾವಗೀತೆ ಮೂಲಕ ಕನ್ನಡಿಗರ ಭಾವನೆಗಳನ್ನು ಮೀಟಿದವರು. ಕನ್ನಡ ಸಾಹಿತ್ಯದ ಮೇರು ಪರ್ವತದಂತಿದ್ದ ಭಾವಕವಿ. ಕವಿತೆ ಉಸಿರು, ಕವಿತೆಯೇ ಬದುಕು, ಅದೇ ನನಗೆ ಸರ್ವಸ್ವ ಎನ್ನುತ್ತಿದ್ದ ಇವರು, ನೋವು, ನಲಿವು, ವಿಷಾದವನ್ನೆಲ್ಲ ಕಾವ್ಯದ ಮೂಲಕವೇ ತೆರೆದಿಟ್ಟಿದ್ದರು. ವಿವಿಧ ಸಾಹಿತ್ಯದ ಪ್ರಕಾರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದವರು. ವಿಶೇಷವಾಗಿ ಕನ್ನಡ ಸಾರಸತ್ವ ಲೋಕದಲ್ಲಿ ಕಾವ್ಯಕ್ಕೆ ಹೆಚ್ಚು ಕೊಡುಗೆ ಕೊಟ್ಟವರು. ಇವರ ಅಗಲಿಕೆಯಿಂದ ಸಾಹಿತ್ಯ ಲೋಕ ಬಡವಾಗಿದೆ ಎಂದರು.

ಕವಿ ಬಿ.ಆರ್​.ಲಕ್ಷ್ಮಣರಾವ್​​ ಮಾತನಾಡಿ, ಎಚ್​ಎಸ್​ವಿ ನನಗೆ ದೊಡ್ಡ ಅಣ್ಣನಂತೆ ಇದ್ದರು. ಕನ್ನಡದ ಕಾವ್ಯ ಕ್ಷೇತ್ರವನ್ನು ಹಿಗ್ಗಿಸಿದವರು. ಅವರು ಕೈಯಾಡಿಸಿದ ಎಲ್ಲ ಸಾಹಿತ್ಯ ಪ್ರಕಾರದಲ್ಲೂ ಕಾವ್ಯದ ಗುಣವಿತ್ತು. ಏನು ಬರೆದರೂ ಅದು ಕಾವ್ಯದಂತೆಯೇ ಇರುತ್ತದೆ ಎಂದು ಮೆಚ್ಚುಗೆಯ ಮಾತು ಕೇಳಿಬರುತ್ತಿತ್ತು. ಹಾಗಾಗಿ, ಇವರನ್ನು ಕವಿಗಿಂತ ಕಾವ್ಯ ರಚನೆಗಾರರೆಂದು ಕರೆಯಬೇಕು ಎಂದು ಹೇಳಿದರು.

ಶಿಕ್ಷಣ ತಜ್ಞ ಪ್ರೊ ಕೆ.ಇ. ರಾಧಾಕೃಷ್ಣ ಅವರು ಎಚ್​ಎಸ್​ವಿ ಕಾವ್ಯದ ಕುರಿತು ಮಾತನಾಡಿದರು, ಗಾಯಕಿ ಎಂ.ಡಿ. ಪಲ್ಲವಿ ಗೀತೆ ಮತ್ತು ಬಿ. ಜಯಶ್ರೀ ರಂಗದ ಮೂಲಕ ವೆಂಕಟೇಶಮೂರ್ತಿಗೆ ಗೌರವ ಸಲ್ಲಿಸಲಾಯಿತು. ಕಪ್ಪಣ್ಣ ಅಂಗಳದ ಶ್ರೀನಿವಾಸ್​ ಜಿ. ಕಪ್ಪಣ್ಣ, ನಟ ಸುಂದರ್​ ವೀಣಾ, ಉಪನ್ಯಾಸಕಿ ಪ್ರೊ. ವತ್ಸಲ ಮೋಹನ್​ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net