ಮೈಸೂರಿನಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಆಮೆಗತಿ

mysore
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಹಳೇ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸುವ ಕಾರ್ಯ ಜಿಲ್ಲೆಯ ಮಟ್ಟಿಗೆ ಮಂದಗತಿಯಲ್ಲಿ ಸಾಗಿದೆ.

ಈ ಫಲಕ ಅಳವಡಿಸಿಕೊಳ್ಳಲು ನಿಗದಿಪಡಿಸಿದ್ದ ಗಡುವು ಮುಗಿಯಲು ಕೇವಲ 10 ದಿನಗಳು ಬಾಕಿ ಉಳಿದಿವೆ. ಆದರೆ ಪ್ರಗತಿ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಈವರೆಗೂ ಶೇ.7ಕ್ಕಿಂತ ಕಡಿಮೆ ಪ್ರಗತಿ ಸಾಧಿಸಲಾಗಿದ್ದು, ಗುರಿ ತಲುಪುವ ದಾರಿ ಇನ್ನೂ ಬಹಳಷ್ಟು ದೂರ ಇದೆ.

ಕ್ರಮವೂ ಇಲ್ಲ; ಜಾಗೃತಿ ಮೂಡಿಸುತ್ತಿಲ್ಲ

2019ಕ್ಕಿಂತ ಹಿಂದಿನ ಹಳೇ ವಾಹನಗಳ ಸಂಖ್ಯೆ ಜಿಲ್ಲೆಯಲ್ಲಿ ಅಂದಾಜು 4.76 ಲಕ್ಷ ಇದೆ. ಇದರಲ್ಲಿ ಸರಿಸುಮಾರು 33,320 ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಮಾಡಲಾಗಿದೆ. ಉಳಿದ ಹಳೇ ವಾಹನಗಳಿಗೆ ಈ ಫಲಕ ಅಳವಡಿಕೆ ಮಾಡಲು ವಾಹನ ಮಾಲೀಕರು ಮನಸ್ಸು ಮಾಡುತ್ತಿಲ್ಲ. ಇತ್ತ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮವನ್ನೂ ವಹಿಸುತ್ತಿಲ್ಲ. ಅತ್ತ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿಲ್ಲ. ಇದರಿಂದಾಗಿ ಈ ಪ್ರಕ್ರಿಯೆ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂದು ಅಭಿಪ್ರಾಯವಿದೆ.


ಅಪರಾಧ ಕಡಿಮೆ ಮಾಡಲು, ವಾಹನಗಳನ್ನು ಸುಲಭದಲ್ಲಿ ಪತ್ತೆ ಹಚ್ಚಲು, ನಕಲಿ ನಂಬರ್‌ಗಳನ್ನು ತಡೆಗಟ್ಟಲು ಎಚ್‌ಎಸ್‌ಆರ್‌ಪಿ ಅಳವಡಿಕೆ ಕ್ರಮ ಸೂಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಆದೇಶ ಹೊರಡಿಸಿದೆ. 2018ರ ಡಿ.4ರಂದು ಸಿಎಂವಿಆರ್ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಇನ್ಮುಂದೆ ತಯಾರಿಸುವ ಎಲ್ಲ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಕಡ್ಡಾಯಗೊಳಿಸಲಾಗಿದೆ. 2019ರ ಏಪ್ರಿಲ್ 1ರಿಂದಲೇ ಇದು ಅನುಷ್ಠಾನಕ್ಕೆ ಬಂದಿದೆ. ಅದಕ್ಕಿಂತ ಮೊದಲು ನೋಂದಣಿಯಾಗಿದ್ದ ವಾಹನಗಳಿಗೂ ಎಚ್‌ಎಸ್‌ಆರ್‌ಪಿ ಅಳವಡಿಸಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ.


2023ರ ನವೆಂಬರ್ 17ರೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳುವಂತೆ ರಾಜ್ಯ ಸಾರಿಗೆ ಇಲಾಖೆ ಆಗಸ್ಟ್‌ನಲ್ಲಿ ಅಧಿಸೂಚನೆ ಪ್ರಕಟಿಸಿತ್ತು. ಆದರೆ ವಾಹನ ಮಾಲೀಕರು ಹೊಸ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಆಸಕ್ತಿ ವಹಿಸುತ್ತಿಲ್ಲ. ವಾಹನಗಳ ಮೂಲ ತಯಾರಿಕಾ ಸಂಸ್ಥೆಗಳು ಅನುಮತಿ ನೀಡಿದ ಏಜೆನ್ಸಿಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವ ಅವಕಾಶ ನೀಡಿದ್ದು, ಈ ಕ್ರಮವನ್ನು ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಕಾರಣದಿಂದ ಎಚ್‌ಎಸ್‌ಆರ್‌ಪಿ ಫಲಕ ಅಳವಡಿಕೆ ಪ್ರಕ್ರಿಯೆ ಮಂದಗತಿಯಲ್ಲೇ ಸಾಗಿದೆ.

ನೋಂದಣಿ ಅವಧಿ ಮತ್ತೆ ವಿಸ್ತರಣೆ?


2023ರ ನವೆಂಬರ್‌ನಿಂದ ಮತ್ತೆ ಮೂರು ತಿಂಗಳ ಅವಕಾಶ ನೀಡಲಾಗಿತ್ತು. ಫೆ.17 ಕಡೇ ದಿನವಾಗಿದೆ. ಆದಾಗ್ಯೂ ವಾಹನ ಮಾಲೀಕರು ಇನ್ನೂ ಎಚ್ಚೆತ್ತುಕೊಂಡಿಲ್ಲ. ಪರಿಣಾಮ, ಶೇ.93ರಷ್ಟು ವಾಹನಗಳಿಗೆ ಇನ್ನೂ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಲು ಸಾಧ್ಯವೇ ಆಗಿಲ್ಲ. ಆದ್ದರಿಂದ ನೋಂದಣಿ ಅವಧಿ ಮತ್ತೆ ವಿಸ್ತರಣೆ ಆಗುವ ನಿರೀಕ್ಷೆ ಇದೆ.


ನಕಲಿ ಹಾಲೊಗ್ರಾಮ್


ಕೆಲವೆಡೆ ಮುಕ್ತ ಮಾರುಕಟ್ಟೆಯಲ್ಲಿ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹಾಲೊಗ್ರಾಮ್, ಐಎನ್‌ಡಿ ಮಾರ್ಕ್, ಇಂಡಿಯಾ ಎಂದು ಬರೆದಿರುವ ನಂಬರ್ ಪ್ಲೇಟ್ ಅಳವಡಿಸಲಾಗುತ್ತಿದೆ. ಆದರೆ ಇದಕ್ಕೆ ಮಾನ್ಯತೆ ಇಲ್ಲ. ಇದು ಕ್ರಮಬದ್ಧವೂ ಅಲ್ಲ. ನೈಜ ಎಚ್‌ಎಸ್‌ಆರ್‌ಪಿ ಅಳವಡಿಸದೇ ಇದ್ದರೆ ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು ನಮೂದು, ರದ್ದತಿ, ಅರ್ಹತಾ ಪತ್ರ ನವೀಕರಣ ಮಾಡುವುದಿಲ್ಲ. ಅವಧಿ ಮುಗಿಯುವ ಒಳಗೆ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.


ಎಚ್‌ಎಸ್‌ಆರ್‌ಪಿ ಫಲಕ ಅಳವಡಿಕೆ ಬಳಿಕವೇ ಹೊಸ ವಾಹನಗಳು ರಸ್ತೆಗಿಳಿಯುತ್ತವೆ. ಹೀಗಾಗಿ, ಹೊಸ ವಾಹನಗಳಿಂದ ಸಮಸ್ಯೆಯಾಗುತ್ತಿಲ್ಲ. ವಾಹನ ಖರೀದಿ ಮಾಡಿರುವ ಕಂಪನಿಯ ಶೋ ರೂಮ್‌ನವರೇ ಈ ಫಲಕವನ್ನು ಅಳವಡಿಸಿಕೊಡುತ್ತಾರೆ. ಇದಕ್ಕಾಗಿ ಶುಲ್ಕವನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ, ಹೊಸ ವಾಹನಗಳ ಮಾಲೀಕರಿಗೆ ಇದರ ತಲೆಬಿಸಿ ಇಲ್ಲ. ಆದರೆ ಹಳೇ ವಾಹನಗಳ ನೋಂದಣಿಗೆ ಸುಲಭ ಮತ್ತು ಸರಳೀಕರಣ ವ್ಯವಸ್ಥೆ ಇಲ್ಲ. ಇಡೀ ನೋಂದಣಿ ಆನ್‌ಲೈನ್ ಮೂಲಕವೇ ಆಗಬೇಕು. ಇದು ಬಹಳಷ್ಟು ವಾಹನ ಮಾಲೀಕರಿಗೆ ಗೊತ್ತಿಲ್ಲ. ಆಫ್‌ಲೈನ್ ಮೂಲಕ ನಿರ್ದಿಷ್ಟ ಕೇಂದ್ರದಲ್ಲಿ ನೋಂದಣಿಗೆ ಕ್ರಮ ವಹಿಸಬೇಕು ಎಂಬುದು ವಾಹನ ಮಾಲೀಕರ ಆಗ್ರಹವಾಗಿದೆ.

ಮೊದಲು ಜಾಗೃತಿ ಮೂಡಿಸಿ:


ಅತಿ ಸುರಕ್ಷಿತ ನೋಂದಣಿ ಫಲಕ ಎಲ್ಲ ವಾಹನಗಳಿಗೆ ಅಳವಡಿಸುವುದು ಸೂಕ್ತವಾಗಿದೆ. ಆದರೆ ವಾಹನ ಮಾಲೀಕರಿಗೆ ಈ ಕುರಿತು ಸಮರ್ಪಕವಾಗಿ ಅರಿವು ಮೂಡಿಸುವ ಕೆಲಸವಾಗುತ್ತಿಲ್ಲ. ಮೊದಲು ಎಲ್ಲರಿಗೂ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಈ ಪ್ರಕ್ರಿಯೆ ಸರಳೀಕರಣಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.


ಇದೀಗ ಸರ್ವರ್ ಸಮಸ್ಯೆ:

ವಾಹನ ಮಾಲೀಕರು http//transport.karnataka.gov.in ಅಥವಾ www.siam.in ಮೂಲಕ ನಿಗದಿತ ನೋಂದಣಿ ಮಾಡಿಕೊಳ್ಳಬಹುದು. ಆದರೆ ಇದೀಗ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಗಡುವು ಹತ್ತಿರ ಬಂದಾಗಲೇ ವಾಹನ ಮಾಲೀಕರು ನೋಂದಣಿಗೆ ಮುಗಿಬೀಳುತ್ತಿದ್ದಾರೆ. ಅವಧಿ ಮುಗಿದ ಬಳಿಕ ದಂಡ ಹಾಕುತ್ತಾರೆ ಎಂಬ ಭಯವೂ ಶುರುವಾಗಿದೆ. ಹೀಗಾಗಿ, ನೋಂದಣಿ ಹೆಚ್ಚಾಗುತ್ತಿದ್ದಂತೆ ಸರ್ವರ್ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ವಾಹನ ಚಾಲನಾ ತರಬೇತಿ ಶಾಲೆಯ ರವಿ ತಿಳಿಸಿದರು.

ಹಳೇ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಫಲಕ ಅಳವಡಿಕೆ ಮಾಡಿಕೊಳ್ಳಬೇಕು. ಅದಕ್ಕಾಗಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಗಡುವು ಮುಗಿದ ಬಳಿಕ ಸರ್ಕಾರದ ಸೂಚನೆ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು.
ದೇವಿಕಾ, ಆರ್‌ಟಿಒ(ಪಶ್ಚಿಮ), ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net