ಕಾಡಾನೆ ಸಮಸ್ಯೆ ಪರಿಹಾರಕ್ಕೆ ಸಚಿವರು ಗಮನ ಹರಿಸಲಿ

17blrp2
Published on

ಬೇಲೂರು : ತಾಲೂಕಿನ ಮಲೆನಾಡು ಭಾಗದಲ್ಲಿ ಸತತ ಎರಡು ವರ್ಷದಿಂದ ಕಾಡಾನೆ ಸಮಸ್ಯೆಯಿಂದ ಅಪಾರ ಪ್ರಮಾಣದ ಬೆಳೆ ನಾಶ ಮತ್ತು ಜನರ ಪ್ರಾಣ ಹಾನಿಯಾದರೂ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ದೂರಿದರು. ಕಾಡಾನೆಯಿಂದ ಮೃತರಾದ ತಾಲೂಕಿನ ಬೊಮ್ಮನಹಳ್ಳಿಯ ಸುಶೀಲಮ್ಮ ಅವರ ಮನೆಗೆ ಭಾನುವಾರ ಸಂಜೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ನಾಶ ಮತ್ತು ಜನರ ಪ್ರಾಣ ಹಾನಿಯಾದರೂ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸುತ್ತಿಲ್ಲ. ಸಂಸದರು ಪ್ರತಿಭಟನೆಯಲ್ಲಿ ಶೋ ಕೊಡುತಿದ್ದಾರೆ. ಇಂಥವರಿಂದ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವೇ ಎಂದು ಅವರು ವ್ಯಂಗ್ಯವಾಗಿಡಿದರು. ಸಂಸದರು ಮತ್ತು ಜಿಲ್ಲಾ ಸಚಿವರಿಗೆ ಅವರದೇ ಸರ್ಕಾರವಿದೆ. ಕನಿಷ್ಠ ಒಂದು ದಿನವಾದರೂ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಬಗ್ಗೆ ಅವರು ಮಾತನಾಡಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ 35 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಿದ್ದರು. ಆದರೆ ಈ ಸರ್ಕಾರ ಬಂದ ಬಳಿಕ ಕಾಡಾನೆ ಸಮಸ್ಯೆಗೆ ಯಾವುದೇ ಪರಿಹಾರ ನೀಡಿಲ್ಲ. ಕಳೆದ ಬಜೆಟ್‌ನಲ್ಲಿ ನೆಪಮಾತ್ರಕ್ಕೆ ಹಣ ನೀಡಿದ್ದಾರೆ. ಇದರಿಂದ ಆನೆಗಳನ್ನು ದೂರದ ಕಾಡಿಗೆ ಓಡಿಸಲು ಸಾಧ್ಯವಿಲ್ಲ ಎಂದರು.

ಮಾಗಲು ಹೇಮಾವತಿ ಸೇತುವೆ ಬಳಿ ರೈಲ್ವೆ ಬ್ಯಾರಿಕೇಡ್ ಮುರಿದಿರುವ ಕಾರಣದಿಂದ ಅಲ್ಲಿಂದಲೇ ಸುಮಾರು 65 ಆನೆಗಳು ಕಾಫಿ ತೋಟ ಸೇರಿವೆ. ಇಷ್ಟು ಆನೆಗಳನ್ನು ಏಕಕಾಲಕ್ಕೆ ಸ್ಥಳಾಂತರ ಅಸಾಧ್ಯ. ಸರ್ಕಾರ ಕೆಲವಾದರೂ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದರು.

ಪ್ರಜ್ವಲ್ ರೇವಣ್ಣ ಸಂಸದರಾಗಿದ್ದ ಸಂದರ್ಭ ಮೂರು ತಾಲೂಕಿನ ಶಾಸಕರು ದೆಹಲಿಗೆ ನಿಯೋಗ ತೆರಳಿ ಪರಿಹಾರ ಕೊಡಿಸುವ ಕೆಲಸ ಮಾಡಿದ್ದರು. ಆದರೆ ಇಂದಿನ ಜನಪ್ರತಿನಿಧಿಗಳು ಏನು ಮಾಡಿದ್ದಾರೆ ಎಂದು ಡಾ.ಸೂರಜ್ ಆಕ್ರೋಶ ವ್ಯಕ್ತಪಡಿಸಿದರು. ಒಂದೇ ತಿಂಗಳಲ್ಲಿ ಕಾಡಾನೆಯಿಂದ 4 ಜನರ ಸಾವು ಸಂಭವಿಸಿದೆ. ಜನಪ್ರತಿನಿಧಿಗಳು ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net