

ನುಗ್ಗೇಹಳ್ಳಿ : ಸಮೀಪದ ಗಂಜಲಘಟ್ಟ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ದೇವಮ್ಮ ದೇವಿ ಹಾಗೂ ಶ್ರೀ ಕೊಲ್ಲಾಪುರದಮ್ಮನವರ ರಥೋತ್ಸವವು ಸಿಡಿ ಉತ್ಸವ ಮತ್ತು ಸೋಮನ ಕುಣಿತದೊಂದಿಗೆ ವೈಭವದ ತೆರೆ ಕಂಡಿತು. ನೂರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಬೆಳಗಿನಿಂದಲೇ ಆರಂಭಗೊಂಡ ಅಮ್ಮನವರ ಜಾತ್ರೋತ್ಸವದ ಪ್ರಕ್ರಿಯೆಗಳಲ್ಲಿ
ಹಲವು ವಿಧಿ, ವಿಧಾನ ಅನುಸರಿಸಲಾಯಿತು. ಮೂಲ ದೇವರಿಗೆ ಜಲ ಅಭಿಷೇಕ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಸಮರ್ಪಣೆ, ಮಹಾಮಂಗಳಾರತಿಯನ್ನು ಅರ್ಚಕರು ನೆರವೇರಿಸಿದರು. ಈ ಸಂದರ್ಭ ಗ್ರಾಮ ದೇವತೆ ಚಿಕ್ಕಮ್ಮ ದೇವಿ, ಕ್ಷೇತ್ರ ರಕ್ಷಕ ದೂತರಾಯ ಮತ್ತು ಕೆಂಚರಾಯಸ್ವಾಮಿಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ 3 ಗಂಟೆಗೆ ಗಂಗಾ ಪೂಜೆ ಮಾಡಲಾಯಿತು.
ನಂತರ ಹೂವಿನ ಅಲಂಕೃತ ರಥದಲ್ಲಿ ಶ್ರೀ ದೇವಮ್ಮ ದೇವಿ, ಶ್ರೀ ಕೊಲ್ಲಾಪುರದಮ್ಮನವರ ಉತ್ಸವ ಮೂರ್ತಿಗಳನ್ನು
ಪ್ರತಿಷ್ಠಾಪಿಸಿ ಮಹಾಮಂಗಳಾರತಿ ಬೆಳಗಲಾಯಿತು. ಗ್ರಾಮದ ಮುಂಭಾಗದಿಂದ ಮೂಲ ದೇವಾಲಯದವರೆಗೂ ಭಕ್ತರು ಜಯ ಘೋಷದೊಂದಿಗೆ ರಥ ಎಳೆದು ಸಂಭ್ರಮಿಸಿದರು. ಗಂಜಲಘಟ್ಟ, ಯಾಚನಘಟ್ಟ, ನಾಗೇನಹಳ್ಳಿ, ಮೂಡಲ ಕೊಪ್ಪಲು, ವೆಂಕಟಾಪುರ, ಭುವನಹಳ್ಳಿ, ಕಂಪಾರಹಳ್ಳಿ, ರೇಚಿಹಳ್ಳಿ ಸೇರಿದಂತೆ ರಾಜ್ಯದ ಇತರ ಊರುಗಳಿಂದಲೂ ರಥೋತ್ಸವಕ್ಕಾಗಿ ಆಗಮಿಸಿದ್ದ ಭಕ್ತರು
ಧನ್ಯತೆ ಮೆರೆದರು.