

ಹೊಳೆನರಸೀಪುರ : ಸಾರ್ವಜನಿಕ ಆಸ್ಪತ್ರೆಯಲ್ಲಿ ಇನ್ನು ಮುಂದೆ ಮಹಿಳೆಯರ ಗರ್ಭಕೋಶ ತೆಗೆಯಲು ಹೊಟ್ಟೆ ಸರ್ಜರಿ ಮಾಡಬೇಕಿಲ್ಲ. ಬದಲಿಗೆ ಶಸ್ತ್ರಚಿಕಿತ್ಸಾ ರಹಿತವಾಗಿ ಲ್ಯಾಪ್ರೋಸ್ಕೋಪಿಕ್ ಮೂಲಕ ಸಣ್ಣ ರಂಧ್ರ ಮಾಡಿ ಗರ್ಭಕೋಶ ತೆಗೆಯುವ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಧನಶೇಖರ್ ತಿಳಿಸಿದ್ದಾರೆ. ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಮಾದರಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಅಪರೂಪ. ನ್ಯಾಷನಲ್ ಯೂರೋ ಗೈನಕಾಲಜಿ ಕಾರ್ಯಾಗಾರ ಮಾ.21ರ ಗುರುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯಲಿದೆ. ಕಾರ್ಯಾಗಾರ ನಡೆಸಲು ಚೆನ್ನೈ ಮತ್ತು ಬೆಂಗಳೂರಿನ ನುರಿತ ತಜ್ಞರ ತಂಡ ಪಟ್ಟಣದ ಆಸ್ಪತ್ರೆಗೆ ಆಗಮಿಸಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಯೂರೋ ಗೈನಕಾಲಜಿ ತಜ್ಞರು ಒಂದೇ ದಿನ 4 ರಿಂದ 5 ಲ್ಯಾಪ್ರೋಸ್ಕೋಪಿಕಲ್ ಸರ್ಜರಿಯ ಪ್ರಾತ್ಯಕ್ಷಿಕೆ ನೀಡಲಿದ್ದು, ಸ್ಥಳೀಯ ಮತ್ತು ರಾಜ್ಯದ ನಾನಾ ಆಸ್ಪತ್ರೆಗಳ ವೈದ್ಯರು ತರಬೇತಿ ಪಡೆದುಕೊಳ್ಳಲು ಆಗಮಿಸಲಿದ್ದಾರೆ. ಗರ್ಭಕೋಶ ತೆಗೆಯುವ ನಾಲ್ಕೈದು ವಿಧಾನವನ್ನು ಪ್ರಾತಿಕ್ಷಿಕೆ ನೀಡಲಿದ್ದಾರೆ. ಲೈವ್ ಟೆಲಿಕಾಸ್ಟ್ ಮೂಲಕ ಅಪರೇಷನ್ ಕೊಠಡಿಯ ಹೊರಗೆ ದೃಶ್ಯಗೊಳಿಸಲಾಗುವ ಮತ್ತು ಶಸ್ತ್ರಚಿಕಿತ್ಸೆಯ ನೂತನ ಮಾದರಿಯನ್ನು ವಿವರಿಸಲಾಗುತ್ತದೆ. ಜತೆಗೆ ಶಸ್ತ್ರಚಿಕಿತ್ಸೆ ಕುರಿತು ತರಬೇತಿ ಹೊಂದಲು ಬಂದಿರುವ ವೈದ್ಯರ ಸಂದೇಹವನ್ನು ಪರಿಹರಿಸಲಾಗುತ್ತದೆ. ಇದಕ್ಕೆ ತಕ್ಕಂತೆ ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಈಗಾಗಲೇ ಒಳರೋಗಿಗಳಾಗಿ ದಾಖಲಿಸಿಕೊಳ್ಳಲಾಗಿದೆ ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ವಿಧಾನಗಳು ಅವಿಷ್ಕಾರ ಆಗುತ್ತಲೇ ಇರುತ್ತದೆ. ಕಲಿಕೆ ಮತ್ತು ಅಳವಡಿಕೆಯಿಂದ ರೋಗಿಗಳಿಗೆ ಉಪಯೋಗವಾಗಲಿದೆ. ಹಾಸನ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಪಾಲ್ಗೊಂಡು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿಸಿದರು.