

ಬೇಲೂರು : ತಾಲೂಕಿನ ಬೆಳ್ಳಾವರ ಹಾಗೂ ಬೊಮ್ಮೇನಹಳ್ಳಿ ಗ್ರಾಮಳಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟು, ಸಾಕಷ್ಟು ಜನರು ಗಾಯಗೊಂಡ ಹಿನ್ನೆಲೆಯಲ್ಲಿ ಪುಂಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಮಂಗಳವಾರವೂ ಮುಂದುವರಿಯಲಿದೆ. ಇದಕ್ಕಾಗಿ ಕ್ಯಾಂಪಿನಲ್ಲಿರುವ ಸಾಕಾನೆಗಳು ಸಿದ್ಧ್ದವಾಗಿವೆ.7 ಸಾಕಾನೆಗಳ ಮೂಲಕ ಭಾನುವಾರ ಯಶಸ್ವಿ ಕಾರ್ಯಚರಣೆ ನಡೆಸಿ ಒಂದು ಪುಂಡಾನೆ ಸೆರೆ ಹಿಡಿದಿದ್ದು, ಉಳಿದ ಇನ್ನೆರಡು ಪುಂಡಾನೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಹಾಸನ ಜಿಲ್ಲೆಯಲ್ಲಿ ಕಾಡಾನೆಗಳಿಂದ ಉಂಟಾಗುತ್ತಿರುವ ಉಪಟಳದಿಂದಾಗಿ ರೈತರು, ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕೂಲಿ ಕಾರ್ಮಿಕರು ಪರಿತಪಿಸಿದ್ದಾರೆ. ಕಾಡಾನೆಗಳು ಮನುಷ್ಯರ ಮೇಲೆ ದಾಳಿಗೆ ಮುಂದಾಗಿ ಈಗಾಗಲೇ ಸಾಕಷ್ಟು ಜನರನ್ನು ಬಲಿ ಪಡೆದಿವೆ. ಕಾಡಾನೆಗಳ ಹಿಂಡು ದಿನದಿಂದ ದಿನಕ್ಕೆ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟು ಆತಂಕ ಸೃಷ್ಟಿಸಿವೆ.
ಕಾಡಾನೆಗಳನ್ನು ಹಿಡಿದು ಬೇರೆಡೆ ಸಾಗಿಸುವ ಮತ್ತು ಕಾಡಿಗಟ್ಟುವ ಕಾರ್ಯಚರಣೆಗಾಗಿ 7 ಸಾಕಾನೆಗಳು ಬೇಲೂರು ಸಮೀಪದ ವಾಟೇಹಳ್ಳ ಸಸ್ಯ ಕ್ಷೇತ್ರದ ಅರಣ್ಯ ಪ್ರದೇಶದಲ್ಲಿ ಕ್ಯಾಂಪ್ ಮಾಡಿವೆ. ಭಾನುವಾರದ ಕಾರ್ಯಚರಣೆ ಫಲವಾಗಿ ಸೆರೆ ಸಿಕ್ಕ ಒಂದು ಪುಂಡಾನೆಯನ್ನು ಅಭಯಾರಣ್ಯಕ್ಕೆ ಬಿಡಲಾಗಿದೆ. ಸೋಮವಾರ ಸಾಕಾನೆಗಳಿಗೆ ಬಿಡುವು ನೀಡಿದ್ದು, ಮಂಗಳವಾರದಿಂದ ಇನ್ನೆರಡು ಪುಂಡಾನೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ಕೈಗೊಂಡಿದ್ದಾರೆ. ಎರಡು ಪುಂಡಾನೆಗಳು ಎಲ್ಲಿವೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪುಂಡಾನೆಗಳು ಮಂಗಳವಾರ ಬೆಳಗ್ಗೆ ಎಲ್ಲಿರುತ್ತವೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಾಕಾನೆಗಳೊಂದಿಗೆ ಕಾರ್ಯಾಚರಣೆ ರೂಪಿಸಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.