

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಲ್ಲಿ ದೃಢಕಲಶ ಸಮಾರಂಭ ಗುರುವಾರ ನೆರವೇರಿತು.
ದೇರೆಬೈಲು ಡಾ.ಶಿವಪ್ರಸಾದ್ ತಂತ್ರಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಶಾಂತಿಹೋಮ, ಪ್ರಾಯಶ್ಚಿತ್ತ ಹೋಮ, ಸಪ್ತಶುದ್ಧಿ, ರಕ್ಷೋಘ್ನ ಹೋಮ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ನೆರವೇರಿದವು.
ದೇವಸ್ಥಾನದ ಪವಿತ್ರಪಾಣಿ ರತನ್‌ಕುಮಾರ್ ಕಾಮಡ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ದೇವಸ್ಥಾನ ಸಮಿತಿ ಉಪಸ್ಥಿತಿಯಲ್ಲಿ 109 ಕಲಶಾಭಿಷೇಕದೊಂದಿಗೆ ದೃಢಕಲಶ ನೆರವೇರಿತು.
ಸೈನಿಕರಿಗಾಗಿ ಪ್ರಾರ್ಥನೆ
ದೇಶ ಕಾಯುವ ಸೈನಿಕರ ಕ್ಷೇಮಕ್ಕಾಗಿ ದೃಢಕಲಶ ಸಮಾರಂಭದಲ್ಲಿ ಪ್ರಾರ್ಥಿಸಲಾಯಿತು. ದೇಶ, ಕೋಶವನ್ನು, ಸೈನಿಕರನ್ನು ವಿಘ್ನಗಳಿಂದ ಪಾರು ಮಾಡಬೇಕು. ಸದಾ ದೇಶಕ್ಕಾಗಿ ಹಗಲಿರುಳು ತಮ್ಮ ಸೇವೆ ಮುಡಿಪಾಗಿರಿಸಿರುವ ಯೋಧರಿಗೆ ದೇವರು ನಿತ್ಯ ಸನ್ಮಂಗಲ ಉಂಟು ಮಾಡಲಿ ಎಂದು ಪ್ರಾರ್ಥಿಸಲಾಯಿತು.