ಕೊಡಗಿನ ಪಾಲಿಗೆ ಹೃದಯಜ್ಯೋತಿ ವರದಾನ

Hridayajyoti boon for Kodagu
Published on

ಮಡಿಕೇರಿ:

ಹೃದಯಾಘಾತಕ್ಕೆ ಒಳಗಾದವರ ಪಾಲಿಗೆ ಸಂಜೀವಿನಿಯಾಗಿರುವ ಡಾ. ಪುನೀತ್‌ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ ಕೊಡಗಿನಲ್ಲಿ ಹಲವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ಈ ಯೋಜನೆ ಮೂಲಕ ಗೋಲ್ಟನ್ ಹವರ್‌ನಲ್ಲೇ ಸೂಕ್ತ ಚಿಕಿತ್ಸೆ ಮತ್ತು ಸಲಹೆಗಳು ಸಿಗುವುದರಿಂದ ಸಾಕಷ್ಟು ಜನರಿಗೆ ಪ್ರಯೋಜನ ಆಗುತ್ತಿದೆ. ಗುಡ್ಡ ಗಾಡು ಪ್ರದೇಶವಾಗಿರುವ ಜಿಲ್ಲೆಯ ಪಾಲಿಗೆ ಈ ಯೋಜನೆ ವರವಾಗಿ ಪರಿಣಮಿಸಿದೆ.

ಕೋವಿಡ್ -೧೯ ಹಾವಳಿ ನಂತರ ಹೃದಯಕ್ಕೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗುತ್ತಿದೆ ಎನ್ನುವುದು ಇತ್ತೀಚೆಗೆ ಸಾಮಾನ್ಯವಾಗಿ ಕೇಳಿಬರುವ ಮಾತು. ಇದಕ್ಕೆ ಪೂರಕವಾಗಿ ಕಳೆದ ೩-೪ ವರ್ಷಗಳಿಂದ ಹೃದಯಾಘಾತಕ್ಕೆ ಒಳಗಾಗಿ ಮೃತ ಪಡುತ್ತಿರುವ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಯುವ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಏಕಾಏಕಿ ಹೃದಯಾಘಾತ ಮತ್ತು ಹೃದಯ ಸ್ತಂಭನಕ್ಕೆ ಒಳಗಾಗಿ ಜೀವ ಕಳೆದುಕೊಳ್ಳುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜೀವಹಾನಿ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಹೃದಯ ಜ್ಯೋತಿ ಎನ್ನುವ ಯೋಜನೆ ಆರಂಭಿಸಿ, ಇದಕ್ಕೆ ಡಾ. ಪುನೀತ್ ರಾಜ್‌ಕುಮಾರ್ ಅವರ ಹೆಸರು ಇಟ್ಟಿದೆ.

ಕನ್ನಡಿಗರ ಕಣ್ಮಣಿ ಆಗಿದ್ದ ಪುನೀತ್ ರಾಜ್‌ಕುಮಾರ್ ೪೬ನೇ ವಯಸ್ಸಿನಲ್ಲಿ ಹೃದ್ರೋಗ ಸಮಸ್ಯೆಯಿಂದ ಮೃತಪಟ್ಟಿದ್ದರು. ಇವರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ಜೀವ ಉಳಿಯುತ್ತಿತ್ತು ಎನ್ನುವುದು ಆರೋಗ್ಯ ಕ್ಷೇತ್ರದ ಪರಿಣಿತರ ಮಾತು. ಹಾಗಾಗಿಯೇ ಇಂಥ ಸಾವಿನ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಡಾ. ಪುನೀತ್‌ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ ಶುರುಮಾಡಿದೆ. ಡಾ. ಪುನೀತ್ ರಾಜ್‌ಕುಮಾರ್ ಅವರ ಎರಡನೇ ಪುಣ್ಯಸ್ಮರಣೆ ಸಂದರ್ಭ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಯೋಜನೆಯನ್ನು ಘೋಷಿಸಿದರು. ೨೦೨೩ರ ನವೆಂಬರ್‌ನಲ್ಲಿ ಈ ಯೋಜನೆಗೆ ಚಾಲನೆ ದೊರೆತಿದೆ. ಇದರ ಮೂಲಕ ಜನರಿಗೆ ಹೃದ್ರೋಗ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಚಿಕಿತ್ಸೆ ವ್ಯವಸ್ಥೆಯನ್ನು ಬಲಪಡಿಸಿ ತ್ವರಿತ ಚಿಕಿತ್ಸೆಯನ್ನು ನೀಡುವ ಉದ್ದೇಶ ರಾಜ್ಯ ಆರೋಗ್ಯ ಇಲಾಖೆಯದ್ದಾಗಿದೆ. ಈ ನಿಟ್ಟಿನಲ್ಲಿ ಯೋಜನೆ ಫಲಪ್ರದವಾಗುವ ದಾರಿಯಲ್ಲಿದೆ.

ಹೃದಯಾಘಾತಕ್ಕೆ ಒಳಗಾದವರಿಗೆ ಗೋಲ್ಡನ್ ಟೈಮ್ ಒಳಗೆ ಚಿಕಿತ್ಸೆ ಕೊಡುವುದು ಬಹಳ ಮುಖ್ಯ. ಹೀಗೆ ಚಿಕಿತ್ಸೆ ಕೊಡುವುದರಿಂದ ಹೃದಯಾಘಾತ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಜೀವಗಳನ್ನ ಉಳಿಸಬಹುದು ಎನ್ನುವುದು ವೈದ್ಯಕೀಯ ತಜ್ಞರ ಅಭಿಪ್ರಾಯ. ಗೋಲ್ಡನ್ ಟೈಮ್ ಒಳಗೆ ಸಮೀಪದಲ್ಲಿಯೇ ಸೂಕ್ತ ಚಿಕಿತ್ಸೆ ದೊರೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹೃದಯಾಘಾತ ಜತೆಗೆ ಪಾರ್ಶ್ವವಾಯು ಚಿಕಿತ್ಸೆಯನ್ನು ಕೊಡಲು ಕೂಡ ಈ ಯೋಜನೆ ಮೂಲಕ ಸರ್ಕಾರ ಕ್ರಮ ತೆಗೆದುಕೊಂಡಿದೆ.

ಪಶ್ಚಿಮಘಟ್ಟದ ಬೆಟ್ಟಗುಡ್ಡಗಳಿಂದ ಕೂಡಿರುವ ಕೊಡಗಿನಲ್ಲಿ ಮೊದಲಿನಿಂದಲೂ ಆರೋಗ್ಯ ಕ್ಷೇತ್ರದಲ್ಲಿ ತಜ್ಞರ ಸೇವೆಯ ಕೊರತೆ ಇದೆ. ಅಪಘಾತ, ಹೃದಯಾಘಾತ ಹಾಗೂ ಇತರ ತುರ್ತು ಸಂದರ್ಭಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಸ್ಥಳೀಯವಾಗಿ ದೊರೆತರೂ ಹೆಚ್ಚಿನ ಚಿಕಿತ್ಸೆಗಾಗಿ ದೂರದ ಮಂಗಳೂರು, ಮೈಸೂರು ಅಥವಾ ಬೆಂಗಳೂರಿಗೆ ಹೋಗುವ ಅನಿವಾರ್ಯತೆ ಇದೆ. ಇಂಥ ಸಂದರ್ಭದಲ್ಲಿ ದೊಡ್ಡ ಆಸ್ಪತ್ರೆಗೆಳಿಗೆ ತೆರಳುವ ದಾರಿಯಲ್ಲೇ ಪ್ರಾಣ ಕಳೆದುಕೊಂಡವ ಸಂಖ್ಯೆಯೇನೂ ಕಡಿಮೆಯಿಲ್ಲ. ಜಿಲ್ಲೆಗೆ ವೈದ್ಯಕೀಯ ಕಾಲೇಜು ಬಂದಿದ್ದರೂ ಈ ಸಮಸ್ಯೆ ಪೂರ್ಣವಾಗಿ ಪರಿಹಾರವಾಗಿಲ್ಲ.

ಇಂಥ ಪರಿಸ್ಥಿತಿಯಲ್ಲಿ ಪುನೀತ್‌ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ ಕೊಡಗಿನ ಪಾಲಿಗೆ ವರದಾನವಾಗಿದೆ. ಜಿಲ್ಲೆಯಲ್ಲಿ ಯೋಜನೆ ಆರಂಭವಾದಾಗಿನಿಂದ ೧,೪೯೦ ಜನರಲ್ಲಿ ಹೃದಯದ ಗಂಭೀರ ಸಮಸ್ಯೆ ಇರುವ ರೋಗಿಗಳನ್ನು ಗುರುತಿಸಲಾಗಿದ್ದು, ಇವರಿಗೆ ಅವಶ್ಯವಿರುವ ಚಿಕಿತ್ಸೆಗಳ ಬಗ್ಗೆ ಸಲಹೆಗಳನ್ನು ಕೊಡುವುದಲ್ಲದೆ, ಅಗತ್ಯ ಬಿದ್ದಲ್ಲಿ ತಜ್ಞರ ಬಳಿಯೂ ತಪಾಸಣೆಗೆ ಅವಕಾಶ ಮಾಡಿಕೊಡಲಾಗಿದೆ. ೯೪ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವ ಮೂಲಕ ಅವರ ಜೀವ ಉಳಿಸಲು ಸಹಕರಿಸಲಾಗಿದೆ. ಈ ಪೈಕಿ ಹಲವರಿಗೆ ಜೀವ ರಕ್ಷಕವಾಗಿರುವ ಸುಮಾರು ೨೫ ಸಾವಿರ ರೂ. ಬೆಲೆ ಬಾಳುವ ಟೆನೆಕ್ಟೆಪ್ಲೆಸ್ ಇಂಜೆಕ್ಷನ್ ಕೂಡ ಕೊಡಲಾಗಿದೆ. ಹಾಗಾಗಿ ಈ ಯೋಜನೆ ಜಿಲ್ಲೆಯ ಪಾಲಿಗೆ ದೊಡ್ಡ ನಿರೀಕ್ಷೆಯಾಗಿ ಮೂಡಿಬಂದಿದೆ.

ಎದೆನೋವು ಕಾಣಿಸಿಕೊಂಡ ಸಂದರ್ಭ ಸ್ಪೋಕ್ ಕೇಂದ್ರಗಳಿಗೆ ಭೇಟಿ ನೀಡಿದರೆ ತಕ್ಷಣ ಇಸಿಜಿ ಮಾಡಲಾಗುತ್ತೆ. ಇದಲ್ಲದೆ ಖಾಸಗಿ ಸಂಸ್ಥೆಯವರ ಎಐ ತಂತ್ರಜ್ಞಾನದ ಸಹಾಯ ಪಡೆದುಕೊಂಡು ರೋಗಿಯಪರಿಸ್ಥಿತಿ ಗಂಭೀರತೆಯಿಂದ ಕೂಡಿದೆಯಾ ಅಥವಾ ಸಾಮಾನ್ಯವಾಗಿದೆಯಾ ಎನ್ನುವುದನ್ನು ಸ್ಥಳದಲ್ಲಿಯೇ ೪-೫ ನಿಮಿಷದೊಳಗೆ ಪತ್ತೆ ಮಾಡಲಾಗುತ್ತದೆ. ರೋಗಿಯ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದರೆ ಅವರಿಗೆ ಸ್ಪೋಕ್ ಕೇಂದ್ರಗಳಲ್ಲೇ ಉಚಿತವಾಗಿ ಟೆನೆಕ್ಟೆಪ್ಲೆಸ್ ಇಂಜೆಕ್ಷನ್ ಕೊಡಲಾಗುತ್ತೆ. ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು ೩೦ ಸಾವಿರ ಬೆಲೆ ಇರುವ ಈ ಇಂಜೆಕ್ಷನ್ ಹಠಾತ್ ಹೃದಯಾಘಾತ ಆಗುವುದನ್ನ ತಡೆಯುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಇದರಿಂದಾಗಿ ಕ್ರಿಟಿಕಲ್ ಹಂತದಲ್ಲಿ ಇರುವವರಿಗೆ ತಕ್ಷಣಕ್ಕೆ ಹಾರ್ಟ್ ಅಟ್ಯಾಕ್ ಆಗದಂತೆ ನೋಡಿಕೊಳ್ಳುವಲ್ಲಿ ಈ ಚಿಕಿತ್ಸೆ ಸಹಕಾರಿಯಾಗಲಿದೆ. ನಂತರ ಹಬ್ ಕೇಂದ್ರಕ್ಕೆ ಕಳುಹಿಸಿಕೊಟ್ಟು ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತದೆ.
ಒಬ್ಬ ವ್ಯಕ್ತಿಗೆ ಎದೆ ನೋವು ಕಾಣಿಸಿಕೊಂಡರೆ ಅಥವಾ ಅನಿರೀಕ್ಷಿತ ಹೃದಯಾಘಾತ ಸಂಭವಿಸಿದರೆ ಡಾ. ಪುನೀತ್‌ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

ಬಿಪಿಎಲ್ ಕಾಡ್‌ದಾರರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಆರೈಕೆ ಸಿಗುತ್ತದೆ. ಎಪಿಎಲ್ ಕಾರ್ಡ್‌ದಾರರು ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಮೂಲಕ ಪೂರಕ ವೈದ್ಯಕೀಯ ಆರೈಕೆ ಪಡೆಯಬಹುದಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಯೋಜನೆ ಕಾರ್ಯಗತಗೊಂಡಿದ್ದು, ಕೊಡಗಿನಲ್ಲಿ ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ ಸ್ಪೋಕ್ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಮೈಸೂರಿನಲ್ಲಿ ಇರುವ ಜಯದೇವ ಹೃದ್ರೋಗ ಆಸ್ಪತ್ರೆ ಕೊಡಗಿನ ಹಬ್ ಕೇಂದ್ರವಾಗಿದೆ.

ಹಠಾತ್ ಹೃದಯಘಾತ ಆಗದಂತೆ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಮೂಲಕ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲೂ ಜೀವರಕ್ಷಕ ಚುಚ್ಚುಮದ್ದುಗಳನ್ನ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೃದಯಾಘಾತ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ದುಬಾರಿ ಬೆಲೆಯ ಚುಚ್ಚುಮದ್ದು ಟೆನೆಕ್ಟೆಪ್ಲೆಸ್ ಅನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. ನಮ್ಮ ಗ್ರಾಮೀಣ ಪ್ರದೇಶದ ಜನರು ಇದರ ಉಪಯೋಗ ಪಡೆದುಕೊಳ್ಳುವಂತಾಗಬೇಕು.
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಕೊಡಗಿನ ಪಾಲಿಗೆ ಅತ್ಯಂತ ಉಪಯೋಗ ಆಗಿದೆ. ಜಿಲ್ಲೆಯಲ್ಲಿ ಯೋಜನೆ ಆರಂಭವಾದಾಗಿನಿಂದ ೧,೪೯೦ ಜನರಲ್ಲಿ ಹೃದಯದ ಗಂಭೀರ ಸಮಸ್ಯೆ ಇರುವ ರೋಗಿಗಳನ್ನು ಗುರುತಿಸಲಾಗಿದೆ. ಟೆನೆಕ್ಟೆಪ್ಲೆಸ್ ಚುಚ್ಚುಮದ್ದು ಬಳಕೆ ಸೇರಿದಂತೆ ೯೪ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವ ಮೂಲಕ ಅವರ ಜೀವ ಉಳಿಸಲು ಸಹಕರಿಸಲಾಗಿದೆ. ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಆರೋಗ್ಯ ಸಚಿವರ ಸೂಚನೆಯಂತೆ ತಾಲೂಕು ಕೇಂದ್ರಗಳಲ್ಲೂ ಈ ವ್ಯವಸ್ಥೆ ಸದ್ಯದಲ್ಲೇ ಆರಂಭಿಸಲಾಗುವುದು.
ಡಾ. ಕೆ.ಎಂ. ಸತೀಶ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net