ಕುಮಾರೇಶ್ವರ ಆಸ್ಪತ್ರೆಯಲ್ಲಿ ಹೃದಯ ಜ್ಯೋತಿ ಯೋಜನೆ

Hriday Jyothi Project at Kumareshwar Hospital
ಬಾಗಲಕೋಟೆ ನಗರದ ಕುಮಾರೇಶ್ವರ ಆಸ್ಪತ್ರೆಯಲ್ಲಿ ತರಬೇತಿ ಶಿಬಿರದ ಉದ್ಘಾಟನೆ ಸಂದರ್ಭದಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ, ವೀರಣ್ಣ ಚರಂತಿಮಠ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ. ಸಜ್ಜನ (ಬೇವೂರ), ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ. ಭುವನೇಶ್ವರಿ ಯಳಮಲಿ, ಜೀವ ರಕ್ಷಾ ಟ್ರಸ್ಟ್ ಕೋಆರ್ಡಿನೇಟರ್ ಡಾ. ರಾಜು ನರಸಯ್ಯ, ಡಾ. ಶ್ರೀರಾಮ ಕೋರಾ ಉಪಸ್ಥಿತರಿದ್ದರು.
Published on

ಬಾಗಲಕೋಟೆ: ನಗರದ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯನ್ನು ಕರ್ನಾಟಕ ಸರ್ಕಾರದ ಪುನೀತ್ ರಾಜಕುಮಾರ ಹೃದಯ ಜ್ಯೋತಿ ಯೋಜನೆಯ ಚಿಕಿತ್ಸಾ ಕೇಂದ್ರವಾಗಿ ಆಯ್ಕೆ ಮಾಡಲಾಗಿದೆ.

ಹೃದಯಾಘಾತದಂತಹ ಭೀಕರ ಕಾಯಿಲೆಗೆ ತಕ್ಷಣವೇ ಚಿಕಿತ್ಸೆ ನೀಡಲು ಸರ್ಕಾರ ಈ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ 15 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯನ್ನು ಪುನೀತ್ ರಾಜಕುಮಾರ ಹೃದಯಜ್ಯೋತಿ ಯೋಜನೆಯ ಚಿಕಿತ್ಸಾ ಕೇಂದ್ರವೆಂದು ಪರಿಗಣಿಸಲಾಗಿದೆ.

ಈ ಯೋಜನೆಯಲ್ಲಿ ಹೃದಯಾಘಾತಕ್ಕೊಳಗಾದ ರೋಗಿಗೆ ತಕ್ಷಣವೇ ತುರ್ತು ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಇರುತ್ತದೆ. ಬಾಗಲಕೋಟೆ, ಮುಧೋಳ, ಹುನಗುಂದ, ಕಲಬುರ್ಗಿ ಮತ್ತು ಕುಷ್ಠಗಿ ತಾಲೂಕುಗಳನ್ನು ಕುಮಾರೇಶ್ವರ ಆಸ್ಪತ್ರೆಯ ಚಿಕಿತ್ಸಾ ಕೇಂದ್ರದ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ.

ಈ ಯೋಜನೆಯ ಮೊದಲ ಹಂತವಾಗಿ ಏ. 23 ರಿಂದ ಏ.25 ರ ವರೆಗೆ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯಲ್ಲಿ ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರು, ನರ್ಸಿಂಗ್ ಸಿಬ್ಬಂದಿ, ಅಂಬ್ಯುಲೆನ್ಸ್ ಚಾಲಕರು ಹಾಗೂ ಸಹಾಯಕ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ವ್ಯಕ್ತಿಯು ಹೃದಯಾಘಾತಕ್ಕೊಳಗಾದ ಸಂದರ್ಭ ಕೈಗೊಳ್ಳಬೇಕಾದ ತುರ್ತು ಚಿಕಿತ್ಸೆಯ ಬಗ್ಗೆ ಈ ತರಬೇತಿ ಶಿಬಿರದಲ್ಲಿ ಕುಮಾರೇಶ್ವರ ಆಸ್ಪತ್ರೆಯ ಪರಿಣಿತ ವೈದ್ಯರಿಂದ ಪ್ರಾತ್ಯಕ್ಷಿಕ ತರಬೇತಿ ನೀಡಲಾಗುವುದು. ಈ ತರಬೇತಿಯನ್ನು ಜೀವರಕ್ಷಾ ಟ್ರಸ್ಟ್‌ನ ಸಹಯೋಗದಲ್ಲಿ ಆಯೋಜಿಸಲಾಗಿದೆ.

ಈ ನೂತನ ಆರೋಗ್ಯ ಯೋಜನೆಯ ಅನುಷ್ಠಾನಕ್ಕಾಗಿ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯನ್ನು ಚಿಕಿತ್ಸಾ ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿದ್ದು ಹೆಮ್ಮೆಯ ಸಂಗತಿ. ಕುಮಾರೇಶ್ವರ ಆಸ್ಪತ್ರೆಯಲ್ಲಿ ಈಗಾಗಲೇ ಹೃದಯ ಸಂಬಂಧಿತ ಕಾಯಿಲೆಗಳಿಗೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಪರಿಣಿತ ಹೃದಯರೋಗ ತಜ್ಞರು ಇಲ್ಲಿ ಕಾರ್ಯನಿರ್ವಹಿಸುತ್ತಿರುವರು. ಈ ಎಲ್ಲ ಸೌಲಭ್ಯಗಳನ್ನು ಪರಿಗಣಿಸಿ ಸರ್ಕಾರ ಬಾಗಲಕೋಟೆ ಜಿಲ್ಲೆಯಲ್ಲಿ ನಮ್ಮ ಆಸ್ಪತ್ರೆಯನ್ನು ಚಿಕಿತ್ಸಾ ಕೇಂದ್ರವಾಗಿ ಗುರುತಿಸಿದೆ. ಸಾರ್ವಜನಿಕರು ಈ ಸೌಲಭ್ಯ ಪಡೆಯಬೇಕು.
ಡಾ. ವೀರಣ್ಣ ಸಿ. ಚರಂತಿಮಠ ಬಿವಿವಿ ಸಂಘದ ಕಾರ್ಯಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net