

-ಹೇಮರಡ್ಡಿ ಮಲ್ಲಮ್ಮಳ ಆದರ್ಶ ಪಾಲಿಸಿ;ಸಚಿವ ಏಚ್.ಕೆ.ಪಾಟೀಲ ಹೇಳಿಕೆ
ಬೆಳಗಾವಿ: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮಳ ಆದರ್ಶತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಹಾಗೂ ಹೇಮ-ವೇಮ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದೆ ಹೇಮರಡ್ಡಿ ಮಲ್ಲಮ್ಮಳನ್ನು ಕೇವಲ ಜಯಂತಿ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಿದ್ದೆವು. ಆದರೆ ಇಂದು ಪೂಜ್ಯ ವೇಮನಾನಂದ ಮಹಾಸ್ವಾಮಿಗಳು ಏರೆಹೊಸಲ್ಲಿಯಲ್ಲಿ ಪೀಠ ಸ್ಥಾಪಿಸಿದ ಮೇಲೆ ರಾಜ್ಯದ ಪ್ರತಿಯೊಂದು ಗ್ರಾಮಗಳಲ್ಲಿ ಹೇಮರಡ್ಡಿ ಮಲ್ಲಮ್ಮ, ಮಹಾಯೋಗಿ ವೇಮನರ ದೇವಸ್ಥಾನಗಳು ನಿರ್ಮಾಣವಾಗಿ ಇಬ್ಬರೂ ಮಹಾತ್ಮರನ್ನು ನಿತ್ಯವೂ ನೆನಪಿಸಿಕೊಳ್ಳುವಂತಾಗಿದೆ. ಇದಕ್ಕೆ ಪೂಜ್ಯರ ಪರಿಶ್ರಮ ಕಾರಣ ಎಂದರು.
ಮಹಾಯೋಗಿ ವೇಮನರು ಜಗತ್ತು ಕಂಡ ಮಹಾನ್ ಯೋಗಿಯಾಗಿದ್ದು ಅವರ ಸಾಹಿತ್ಯ, ಸಂದೇಶಗಳು ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ. ಅವರು ನೀಡಿದ ಸಂದೇಶ ಪಾಲಿಸಿ ಸಮಾಜವನ್ನು ಮುನ್ನಡೆಸಿ ಇತರೆ ಸಮಾಜಕ್ಕೆ ಮಾದರಿಯಾಗೋಣ. ನಮ್ಮ ಸಮಾಜದ ಕುಲಕಸುಬು ಒಕ್ಕಲುತನವನ್ನು ಮರೆಯುವುದು ಬೇಡ. ಕೃಷಿ ನಮ್ಮತನವನ್ನು ಸದಾ ನೆನಪಿಸುತ್ತದೆ. ಅನ್ಯಾಯದ ವಿರುದ್ಧ ಹೋರಾಡುವ ನಮ್ಮ ಸಮಾಜದ ಗುಣ ಮುಂದುವರೆಯಲಿ. ಈ ನಿಟ್ಟಿನಲ್ಲಿ ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನರು ನಮ್ಮೆಲ್ಲರಿಗೂ ಪ್ರೇರಕ ಶಕ್ತಿಯಾಗಲಿ ಎಂದು ಹೇಳಿದರು. ವೇಮನಾನಂದ ಶ್ರೀಗಳ ದಿವ್ಯ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಸ್.ಆರ್.ಪಾಟೀಲ, ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಪಿ.ಏಚ್.ಪೂಜಾರ, ಶಾಸಕ ಎನ್.ಏಚ್.ಕೋನರಡ್ಡಿ, ಮಾಜಿ ಶಾಸಕ ಬಿ.ಆರ್.ಯಾವಗಲ್, ಆರ್.ವಿ.ಪಾಟೀಲ, ಹಿರಿಯರಾದ ಶಿವನಗೌಡ ನಾಡಗೌಡ, ಕಲ್ಲಪ್ಪ ನಾಯಕ, ವೆಂಕಟೇಶ ನಾಡಗೌಡ, ಕಲ್ಲಪ್ಪ ಅರಳಿಮಟ್ಟಿ,ರಮೇಶ ಅಣ್ಣಿಗೇರಿ, ಶಿವಾನಂದ ಮರೆಗುದ್ದಿ, ರೇಣುಕಾ ಗಿರಡ್ಡಿ ಇತರರಿದ್ದರು.