

ಹುಬ್ಬಳ್ಳಿ: ಮುಂಬರುವ ಗರ್ಭ ಕಂಠದ ಕ್ಯಾನ್ಸರ್ ತಡೆಯಲು ಎಚ್‌ಪಿವಿ ಲಸಿಕೆ ಪಡೆಯುವುದು ಅತ್ಯಗತ್ಯ. ವೈಜ್ಞಾನಿಕವಾಗಿ ಸಾದರಪಡಿಸಿದ ಈ ಪ್ರಕ್ರಿಯೆ ವಿಶ್ವದಾದ್ಯಂತ ಚಾಲನೆಯಲ್ಲಿದೆ ಎಂದು ಖ್ಯಾತ ನರರೋಗ ತಜ್ಞ ಡಾ. ಸುರೇಶ ದುಗಾಣಿ ತಿಳಿಸಿದರು.
ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್, ಐಎಂಎ ಹುಬ್ಬಳ್ಳಿ ಶಾಖೆ ಹಾಗೂ ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ ಸಹಯೋಗದಲ್ಲಿ ನಗರದ ಸ್ಟೇಷನ್ ರಸ್ತೆಯ ಶಿವಕೃಪಾ ಆಸ್ಪತ್ರೆಯಲ್ಲಿ ಭಾನುವಾರ ಏರ್ಪಡಿಸಿದ್ದ ಗರ್ಭಕಂಠದ ಕ್ಯಾನ್ಸರ್‌ಗೆ ಉಚಿತ ಎಚ್‌ಪಿವಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಂದೆ, ತಾಯಿ ಹಾಗೂ ವೈದ್ಯರು ಈ ಪ್ರಕ್ರಿಯೆಗೆ ಸಾಥ್ ನೀಡಬೇಕು. ಶೇ. 95ರಷ್ಟು ಕ್ಯಾನ್ಸರ್ ರೋಗವನ್ನು ಎಚ್‌ಪಿವಿ ತಡೆಯುತ್ತದೆ. ಜೀವನ ಸಂತೋಷದಿಂದ ಇರುವಂತೆ ಮಾಡುತ್ತದೆ. ಕುಟುಂಬ ಮತ್ತು ಸಮಾಜಕ್ಕೂ ಹೊರೆಯಾಗುವುದನ್ನು ತಪ್ಪಿಸುತ್ತದೆ ಎಂದರು.
ಐಎಂಎ ಹುಬ್ಬಳ್ಳಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಶೋಭಾ ಬೆಂಬಳಗಿ ಮಾತನಾಡಿ, ಎಚ್‌ಪಿವಿ ವ್ಯಾಕ್ಸಿನ್ ಶೇ. 90ರಷ್ಟು ಸಾವಿನ ಪ್ರಮಾಣವನ್ನು ತಡೆಯುತ್ತದೆ. ಹೆಣ್ಣು ಮಕ್ಕಳು ಮುಂದೆ ಬಂದು ಈ ಲಸಿಕೆ ಪಡೆಯಬೇಕು. ಮುಂಬರುವ ಗರ್ಭಕಂಠದ ಕ್ಯಾನ್ಸರ್ ತಡೆಯಲು ಮುಂದಾಗಬೇಕು ಎಂದರು.
300ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಉಚಿತವಾಗಿ ಲಸಿಕೆ ಪಡೆದರು.
ಭಾರತೀಯ ಶಸ್ತ್ರ ಚಿಕಿತ್ಸಕರ ಸಂಘದ ಕರ್ನಾಟಕ ಅಧ್ಯಕ್ಷ ಡಾ. ನಾರಾಯಣ ಹೆಬಸೂರ, ಹುಬ್ಬಳ್ಳಿ ಶಾಖೆ ಅಧ್ಯಕ್ಷೆ ಡಾ. ಶಿಲ್ಪಾ ಹುಚ್ಚಣ್ಣವರ, ಕಾರ್ಯದರ್ಶಿ ಡಾ. ಸಂಧ್ಯಾ ಎನ್., ಐಎಂಎ ಹುಬ್ಬಳ್ಳಿ ಶಾಖೆ ಉಪಾಧ್ಯಕ್ಷ ಡಾ. ಬಸವರಾಜ ಸಜ್ಜನ, ಪ್ರಮುಖರಾದ ಡಾ. ಅನಿಲ ಬೆಂಬಳಗಿ, ಡಾ. ಶ್ರೀವಳ್ಳಿ ಹೆಬಸೂರ, ಡಾ. ರೇಣುಕಾ ದುಗಾಣಿ, ಡಾ. ವಿದ್ಯಾ ಹೊನವಾಡ, ಡಾ. ಶೀತಲ್ ಕುಲಗೋಡ, ಡಾ. ನಾಗರೇಖಾ ಹೆಬಸೂರ ಇತರರು ಇದ್ದರು.