

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಆಯೋಜಿಸಿರುವ ಹುಬ್ಬಳ್ಳಿ ಪ್ರಿಮಿಯಂ ಲೀಗ್ (ಎಚ್ಪಿಎಲ್) ಯುತ್ ಕ್ರಿಕೆಟ್ ಟೂರ್ನಿಯ ಟ್ರೋಫಿ ಅನಾವರಣ ಹಾಗೂ ಆಟಗಾರರ ಹರಾಜು ಪ್ರಕ್ರಿಯೆ ಕಾರ್ಯಕ್ರಮ ಹುಬ್ಬಳ್ಳಿಯ ಖಾಸಗಿ ಹೊಟೇಲ್ನಲ್ಲಿ ಶುಕ್ರವಾರ ನಡೆಯಿತು.
ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ನ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಟ್ರೋಫಿ ಅನಾವರಣಗೊಳಿಸಿದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಧಾರವಾಡ ವಲಯ ಸಂಚಾಲಕ ನಿಖಿಲ ಭೂಸದ, ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ಟ್ರಸ್ಟಿಗಳಾದ ಬಾಬಾ ಭೂಸದ, ಪಂಕಜ ಮುನವರ ಹಾಗೂ ಕೈಲಾಸ ಮುನವರ ಇದ್ದರು.
ಎಚ್ಪಿಎಲ್ ಕ್ರಿಕೆಟ್ ಟೂರ್ನಿ ಏ. 28ರಿಂದ ಮೇ 6ರವರೆಗೆ ನಡೆಯಲಿದೆ. 14ರಿಂದ 19 ವಯೋಮಿತಿಯ ಆಟಗಾರರು ಭಾಗವಹಿಸಲಿದ್ದಾರೆ. ವಿವಿ ಸೂಪರ್ ಕಿಂಗ್ಸ್, ಆರ್.ಕೆ. ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಹುಬ್ಬಳ್ಳಿ, ಹುಬ್ಬಳ್ಳಿ ಟೈಗರ್ಸ್, ಆನಂದ ಸ್ಪೋರ್ಟ್ಸ್ ಕಂಪನಿ, ಡಿಪೋ ಟೈಗರ್ಸ್, ಧಾರವಾಡ ಪ್ಯಾಂಥರ್ಸ್ ಹಾಗೂ ಹುಬ್ಬಳ್ಳಿ ಹಿರೋಸ್ ತಂಡಗಳನ್ನು ರಚಿಸಲಾಗಿದೆ. ತಲಾ 4 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಹುಬ್ಬಳ್ಳಿ ದೇಶಪಾಂಡೆನಗರ ಕೆಜಿಎ ಮೈದಾನ ಹಾಗೂ ರಾಜನಗರ ಕೆಎಸ್ಸಿಎ ಮೈದಾನದಲ್ಲಿ ನಿತ್ಯ ತಲಾ 4 ಪಂದ್ಯಗಳು ನಡೆಯಲಿವೆ. ಪ್ರತಿ ಪಂದ್ಯ 30 ಓವರ್ಗಳದ್ದಾಗಿದೆ ಎಂದು ಫೌಂಡೇಷನ್ ಕಾರ್ಯದರ್ಶಿ ಅಮಿತ ಭೂಸದ ತಿಳಿಸಿದರು.
ಪಂದ್ಯಾವಳಿಯಲ್ಲಿ ನಗದು ಬಹುಮಾನ ಇರುವುದಿಲ್ಲ. ವಿನ್ನರ್ ಹಾಗೂ ರನ್ನರ್ ಅಪ್ಗೆ ಆಕರ್ಷಕ ಟ್ರೋಫಿ, ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಗಳು ಇರಲಿವೆ ಎಂದರು.
ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ 8 ತಂಡಗಳು ಮಾಲೀಕರು ಹಾಗೂ ಪ್ರತಿನಿಧಿಗಳು ಒಟ್ಟು 110ಕ್ಕೂ ಹೆಚ್ಚು ಆಟಗಾರರನ್ನು ಆಯ್ಕೆ ಮಾಡಿಕೊಂಡರು.