

ಸುಬ್ರಹ್ಮಣ್ಯ ಭಾರದ್ವಾಜ ಹಳೇಬೀಡು
ರಾಜ್ಯದ ಪ್ರತಿ ಗ್ರಾಮದಲ್ಲಿಯೂ ಕಲಾ ದೇಗುಲಗಳನ್ನು ನಿರ್ಮಿಸಿ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸಿದ್ದ ಹೊಯ್ಸಳರ ಇತಿಹಾಸವನ್ನು ಸಾರುವ ಹೊಯ್ಸಳ ಮಹೋತ್ಸವ ಆಚರಣೆಗೆ ಹಿಡಿದಿರುವ ಗ್ರಹಣವು ದಶಕ ಕಳೆದರೂ ಬಿಡುಗಡೆಯಾಗಿಲ್ಲ. ಈ ನಡುವೆ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರು ಸದ್ಯದಲ್ಲೇ ಉತ್ಸವ ನಡೆಸುವುದಾಗಿ ನೀಡಿರುವ ಭರವಸೆ ಈ ಭಾಗದ ಜನರಲ್ಲಿ ಹೊಸ ಸಂಚಲನ ಮೂಡಿಸಿದೆ.
ಇಪ್ಪತ್ತೈದು ವರ್ಷಗಳ ಹಿಂದೆ ಸಾಂಕೇತಿಕವಾಗಿ ಆರಂಭವಾದ ಹೊಯ್ಸಳ ಉತ್ಸವ ಕಾಲಕ್ರಮೇಣ ಮೆರುಗು ಪಡೆದುಕೊಂಡು ವೈಭವದಿಂದ ನಡೆಯಬೇಕಿತ್ತು. ಆದರೆ, ಕುಂಟುತ್ತಾ ತೆವಳುತ್ತಾ ಸಾಗಿಬಂದು ಪ್ರಸ್ತುತ ಆಚರಣೆಯನ್ನು ಕೇಳುವವರೇ ಇಲ್ಲವಾಗಿದೆ. ಪ್ರತಿ ವರ್ಷ ಉತ್ಸವ ನಡೆಸಿದ್ದರೆ ಈಗಾಗಲೆ ರಜತ ಮಹೋತ್ಸವವೂ ಮುಗಿದಿರುತ್ತಿತ್ತು. ಹಂಪಿ ಉತ್ಸವದ ಮಾದರಿಯಲ್ಲಿ ಜರುಗಬೇಕಿದ್ದ ಪಾರಂಪರಿಕ ವೈಭವವು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷೃದಿಂದ ಹೇಳ ಹೆಸರಿಲ್ಲದಂತಾಗುತ್ತಿರುವುದಕ್ಕೆ ಕಲಾಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
2013ರಲ್ಲಿ ಆಡಳಿತದಲ್ಲಿದ್ದ ಸರ್ಕಾರದ ಉದಾಸೀನ ಮನೋಭಾವಕ್ಕೆ ಸೆಡ್ಡು ಹೊಡೆದು ಸಾರ್ವಜನಿಕರೆ ಒಂದಾಗಿ ಶಾಂತಲಾ ಉತ್ಸವವನ್ನು ನಡೆಸಿದ್ದರು. ಇದಕ್ಕೆ ಸಂಗೀತ ನೃತ್ಯ ಅಕಾಡೆಮಿಯ ಸಹಕಾರವೂ ದೊರಕಿದ್ದರಿಂದ ಎಲ್ಲೆಡೆ ಪ್ರಶಂಸೆ ವ್ತಕ್ತವಾಗಿತ್ತು. 2020ರಲ್ಲಿ ಕಾಡಿದ ಕರೊನಾದಿಂದ ಪಾರಂಪರಿಕ ಉತ್ಸವಗಳ ಸಾಧ್ಯತೆಯನ್ನೇ ಮಸುಕು ಮಾಡಿತ್ತು. ಪ್ರಸ್ತುತ ಹಾಸನಾಂಬಾ ದೇಗುಲ ದರ್ಶನಕ್ಕೆ ಆಗಮಿಸಿದ್ದ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವರು ಹೊಯ್ಸಳ ಉತ್ಸವವನ್ನು ಮುಂದಿನ ವರ್ಷ ವೈಭವದಿಂದ ಆಚರಿಸುವ ಬಗ್ಗೆ ರೂಪುರೇಷೆ ಸಿದ್ಧಪಡಿಸಿರುವುದಾಗಿ ಹೇಳಿದ್ದರು. ಇದರಿಂದ ಹಳೇಬೀಡು ಭಾಗದ ಕಲಾಪ್ರೇಮಿಗಳಲ್ಲಿ ಹೊಸ ಭರವಸೆ ಮೂಡಿದ್ದು, ಸಾಂಸ್ಕೃತಿಕ ಉತ್ಸವ ನಡೆಯಲಿ ಎಂಬ ಅಭಿಪ್ರಾಯವು ಎಲ್ಲೆಡೆ ಕೇಳಿ ಬರುತ್ತಿದೆ.
ಶಿಥಿಲವಾಗುತ್ತಿರುವ ಕಟ್ಟಡಗಳು: ಹೊಯ್ಸಳ ಉತ್ಸವ ಆಚರಣೆಗೆಂದು ಸಮೀಪದ ಪುಷ್ಪಗಿರಿ ಬೆಟ್ಟದಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಿದ್ದ ಬಯಲು ರಂಗಮಂದಿರ, ಕಲಾವಿದರ ಮೇಕಪ್ ಕೊಠಡಿ, ಅತಿಥಿಗಳ ವಿಶ್ರಾಂತಿಗೃಹ ಮುಂತಾದ ಕಟ್ಟಡಗಳು ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡಿವೆ. ವರ್ಷಕ್ಕೊಮ್ಮೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದರೂ ಸುಸಜ್ಜಿತವಾಗಿರುತ್ತಿತ್ತು. ಆದರೆ, ಸರ್ಕಾರಿ ಸಂಸ್ಥೆಗಳ ನಿರ್ಲಕ್ಷೃದಿಂದ ಹಾಳಾಗುತ್ತಿವೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಎರಡನೇ ದೊಡ್ಡ ಬಯಲು ರಂಗಮಂದಿರ ಎಂಬ ಖ್ಯಾತಿಯನ್ನು ಪಡೆದಿದ್ದರೂ ಕಾರ್ಯಕ್ರಮಗಳು ಆಯೋಜನೆಗೊಳ್ಳದೆ ದಿನೇದಿನೆ ವಿರೂಪಗೊಳ್ಳುತ್ತಿದ್ದು, ಗಿಡಗಂಟಿಗಳು ಬೆಳೆದು ಅಂದಗೆಟ್ಟಿದೆ.
ರಂಗಮಂದಿರದ ಮುಂಭಾಗ ಪ್ರೇಕ್ಷಕರು ಕುಳಿತುಕೊಳ್ಳಲು ನಿರ್ಮಿಸಿರುವ ಎಲಿವೇಟೆಡ್ ಮೆಟ್ಟಿಲುಗಳ ಗಾರೆ ಕಿತ್ತು ಬರುತ್ತಿದೆ. ರಂಗಮಂಟಪ ಹಾಗೂ ಗ್ಯಾಲರಿಯಲ್ಲಿ ಮದ್ಯವ್ಯಸನಿಗಳು ಮದ್ಯದ ಬಾಟಲಿಗಳನ್ನು ಒಡೆದಿದ್ದು, ಅನೈತಿಕ ಚಟುವಟಿಕೆಗಳಾಗಿ ಮಾರ್ಪಾಡಾಗುತ್ತಿದೆ.
ಪರ್ಯಾಯ ಕಾರ್ಯಕ್ರಮ ನಡೆಯಲಿ: ಸಾಂಪ್ರದಾಯಿಕ, ಪಾರಂಪರಿಕ ಮತ್ತು ನವ್ಯ ಮಾದರಿಯ ಕಲೆಗೆ ವೇದಿಕೆಯಾಗಿದ್ದ ಹೊಯ್ಸಳ ಮಹೋತ್ಸವ ಆಚರಣೆಯನ್ನು ಸರ್ಕಾರ ಉಪೇಕ್ಷಿಸಿದ್ದರೂ ಕೆಲವು ವರ್ಷ ಸ್ಥಳೀಯವಾಗಿ ಪರ್ಯಾಯ ಉತ್ಸವಗಳನ್ನು ಆಯೋಜಿಸಲಾಗಿತ್ತು. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಸಹಯೋಗದಲ್ಲಿ ಸ್ಥಳೀಯ ಮುಖಂಡರು ಒಂದಾಗಿ ಎರಡು ದಿನದ ಶಾಂತಲಾ ಉತ್ಸವವನ್ನು ನಡೆಸಿದ್ದರು. ಗಾಯನ, ನೃತ್ಯ ಹಾಗೂ ರೂಪಕಗಳ ಪ್ರದರ್ಶನ ಎಲ್ಲರ ಮನಸೂರೆಗೊಂಡಿತ್ತು. ಕಾರ್ಯಕ್ರಮಕ್ಕಾಗಿ ರಂಗಮಂದಿರ ಹಾಗೂ ಇನ್ನಿತರ ಕಟ್ಟಡಗಳನ್ನು ನವೀಕರಿಸಿ ಸುಸ್ಥಿತಿಗೆ ತರಲಾಗಿತ್ತು. ಕೋವಿಡ್‌ಗೆ ಮುನ್ನ ಪುಷ್ಪಗಿರಿ ಶ್ರೀಗಳ ನೇತೃತ್ವದಲ್ಲಿ ವೈಭವದ ಪುಷ್ಪಗಿರಿ ಉತ್ಸವವನ್ನು ಆಯೋಜಿಸಲಾಗಿತ್ತು. ಸರ್ಕಾರಿ ಅನುದಾನವನ್ನು ನೆಚ್ಚಿಕೊಳ್ಳದೆ ಪಾರಂಪರಿಕ ಉತ್ಸವ ನಡೆಸಿ ಯಶಸ್ವಿಗೊಳಿಸಲಾಗಿತ್ತು. ಹಾಗಾಗಿ ಸ್ಥಳೀಯವಾಗಿ ಸಮಿತಿ ರಚಿಸಿ ಇಲ್ಲಿನ ಕಲಾವಿದರಿಗೂ ಅವಕಾಶ ಕಲ್ಪಿಸಿದರೆ ಹೊಯ್ಸಳ ಮಹೋತ್ಸವವನ್ನು ಜನರ ಕಾರ್ಯಕ್ರಮವಾಗಿ ರೂಪಿಸಬಹುದು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.
ಕರುನಾಡನ್ನು ಮುನ್ನೂರು ವರ್ಷ ಆಳಿದ ಹೊಯ್ಸಳರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಅಗತ್ಯವಾಗಿದೆ. ಅದು ಮೂಲಸ್ಥಾನದಿಂದಲೆ ಆರಂಭವಾಗಬೇಕು. ಚಿಕ್ಕಮಗಳೂರು ಜಿಲ್ಲೆಯ ಅಂಗಡಿ ಗ್ರಾಮದಿಂದ ಹೊಯ್ಸಳ ಉತ್ಸವದ ಕಾರ್ಯಕ್ರಮಗಳು ಉದ್ಘಾಟನೆಯಾಗಿ ಹಳೇಬೀಡು, ಬೇಲೂರಿನಲ್ಲಿ ಜರುಗಿ ವೈಭವದ ಸಮಾಪ್ತಿ ಕಾಣಬೇಕು. ಸಾಂಪ್ರದಾಯಿಕ ಹಾಗೂ ಜಾನಪದ ನೃತ್ಯ ರೂಪಕಗಳಿಗೆ ಆದ್ಯತೆ ನೀಡಿ ಇತಿಹಾಸ ಮರುಕಳಿಸುವಂತೆ ಮಾಡಬೇಕು ಎನ್ನುವುದು ಸ್ಥಳೀಯ ಕಲಾಪ್ರೇಮಿಗಳ ಆಶಯವಾಗಿದೆ.