ಪ್ರತಿವರ್ಷ ಹೊಯ್ಸಳ ಉತ್ಸವ ನಡೆಸಿ

ಪ್ರತಿವರ್ಷ ಹೊಯ್ಸಳ ಉತ್ಸವ ನಡೆಸಿ
Published on

ಹಾಸನ: ಹೊಯ್ಸಳರ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಹಾಗೂ ಹಂಪೆಯ ಮಾದರಿಯಲ್ಲಿ ಪ್ರತಿವರ್ಷ ಹೊಯ್ಸಳ ಉತ್ಸವವನ್ನು ಜಿಲ್ಲೆಯಲ್ಲಿ ಸರ್ಕಾರಿ ಪ್ರೋತ್ಸಾಹದೊಂದಿಗೆ ಆಚರಿಸಬೇಕೆಂದು ಒತ್ತಾಯಿಸಲು, ನವಕರ್ನಾಟಕ ಯುವಶಕ್ತಿ ವತಿಯಿಂದ ಭಾನುವಾರ ನಗರದಲ್ಲಿ ಭವ್ಯ ಹೊಯ್ಸಳ ಉತ್ಸವ ಮೆರವಣಿಗೆ ನಡೆಯಿತು.

ನಗರದ ಪೃಥ್ವಿ ಥಿಯೇಟರ್ ಬಳಿಯಿಂದ ಹೊರಟ ಹೊಯ್ಸಳ ಉತ್ಸವದ ಸಾಂಸ್ಕೃತಿಕ ಕಲಾತಂಡಗಳು ಹಾಗೂ ಆಟೋ ರಿಕ್ಷಾಗಳ ಮೇಲೆ ಇರಿಸಿದ್ದ ಹಿರಿಯ ಸಾಹಿತಿಗಳು, ಕನ್ನಡ ಚಲನಚಿತ್ರ ನಾಯಕ ನಟರ ಭಾವಚಿತ್ರಗಳು ಗಮನಸೆಳೆದವು. ನಗರದ ಬಿ.ಎಂ. ರಸ್ತೆ, ಎನ್.ಆರ್. ವೃತ್ತದ ಮೂಲಕ ಹಾಸನಾಂಬ ಕಲಾಕ್ಷೇತ್ರಕ್ಕೆ ಬಂದು ತಲುಪಿತು.

ಸಂಸ್ಕೃತಿ ಪರಿಚಯಿಸುವ ಪ್ರಯತ್ನವಾಗಲಿ: ನವಕರ್ನಾಟಕ ಯುವಶಕ್ತಿ ಸಂಘಟನೆ ರಾಜ್ಯಾಧ್ಯಕ್ಷ ಕೆ.ಎನ್.ಲಿಂಗೇಗೌಡ ಮಾತನಾಡಿ, ನಮ್ಮ ಹೊಯ್ಸಳರ ಉತ್ಸವದ ಉದ್ದೇಶ ಕೇವಲ ಮನರಂಜನೆಯಷ್ಟೇ ಅಲ್ಲದೆ, ಮುಂದಿನ ಪೀಳಿಗೆಗೆ ನಾಡಿನ ಶ್ರೇಷ್ಠ ಪರಂಪರೆ, ಕಲೆ ಮತ್ತು ಸಂಸ್ಕೃತಿ ಪರಿಚಯಿಸುವ ಪ್ರಯತ್ನವೂ ಆಗಲಿದೆ. ಈ ನಾಡು ಹೊಯ್ಸಳರ ನಾಡು. 11 ಶತಮಾನದಿಂದ 16ನೇ ಶತಮಾನದವರೆಗೂ ಕನ್ನಡಿಗರು ಹೆಮ್ಮೆಪಡುವ ರೀತಿಯಲ್ಲಿ ಪಕ್ಕದ ತಮಿಳುನಾಡು ಮತ್ತು ಆಂಧ್ರ ಸೇರಿದಂತೆ ದಕ್ಷಿಣ ಭಾರತದಲ್ಲಿ ನಮ್ಮ ಕನ್ನಡಿಗರ ಹಿರಿಯ ಗರಿಮೆಯನ್ನು ಎತ್ತಿ ಹಿಡಿದಂತಹ ಹೊಯ್ಸಳರು ನಮಗೆ ಅನೇಕ ಕೊಡುಗೆಯನ್ನು ಕೊಟ್ಟು ಹೋಗಿದ್ದಾರೆ ಎಂದರು. ಇಂತಹ ವೈಭವ ಉಳಿಸಬೇಕಾದರೇ ಅದಕ್ಕೊಂದು ಪ್ರಾಧಿಕಾರ ಬರಬೇಕು ಎಂದರು.

ಬೇಲೂರು ಹಳೇಬೀಡು ದೇವಸ್ಥಾನಗಳು ಕೇವಲ ದೇವಾಲಯಗಳಲ್ಲ. ಅದು ಕನ್ನಡ ನಾಡನ್ನು ಕಲ್ಲಿನಲ್ಲಿ ಕೆತ್ತಿರುವ ಕಾವ್ಯ. ಅವುಗಳನ್ನು ಉಳಿಸಬೇಕಾದುದು ಕನ್ನಡಿಗರಾದ ನಮ್ಮ ಆಧ್ಯ ಕರ್ತವ್ಯ. ಹಾಗಾಗಿ ಹೊಯ್ಸಳರ ಉತ್ಸವವನ್ನು ಸರ್ಕಾರ ಮಾಡಬೇಕು ಎಂಬುವುದು ನವಕರ್ನಾಟಕ ಯುವಶಕ್ತಿಯ ಆಗ್ರಹವಾಗಿದೆ ಎಂದರು.

ಈ ವರ್ಷ ಸಾಂಕೇತಿಕವಾಗಿ ಸಣ್ಣಪ್ರಯತ್ನವಾಗಿ ಉತ್ಸವ ಮಾಡಲಾಗಿದೆ. ಬೇಲೂರು, ಹಳೇಬೀಡು ಸೇರಿದಂತೆ 25 ಅದ್ಭುತವಾದಂತಹ ದೇವಾಲಯಗಳಿವೆ. ಅದರ ಸಂರಕ್ಷಣೆ ಮಾಡಲು ಸರ್ಕಾರ ಹೊಯ್ಸಳ ಪ್ರಾಧಿಕಾರ ರಚನೆ ಮಾಡಲೇಬೇಕು. ಜತೆಗೆ ಪ್ರತಿವರ್ಷ ಮಹಾನ್ ಸಾಮ್ರಾಟರ ಹಂಪೆಯ ಉತ್ಸವದ ಮಾದರಿಯಲ್ಲಿ ಹೊಯ್ಸಳ ಉತ್ಸವ ಆಗಬೇಕು ಎಂಬುದು ಕನ್ನಡಿಗರ ಆಗ್ರಹವಾಗಿದೆ. ಜತೆಗೆ ನಗರದಲ್ಲಿ ಕನ್ನಡ ಭವನ ನಿರ್ಮಿಸಿ ಕನ್ನಡದ ಚಟುವಟಿಕೆ ಆಗಬೇಕು ಎಂಬುದು ನವಕರ್ನಾಟಕ ಯುವ ಶಕ್ತಿಯ ಒತ್ತಾಯವಾಗಿದೆ ಎಂದು ಹೇಳಿದರು.

ಮೆರವಣಿಗೆಯಲ್ಲಿ ನವಕರ್ನಾಟಕ ಯುವಶಕ್ತಿ ರಾಜ್ಯ ಉಪಾಧ್ಯಕ್ಷ ಶಂಕರ್ ಗೌಡ, ಜಿಲ್ಲಾ ಅಧ್ಯಕ್ಷ ಬಿ.ಆರ್.ನಂದೀಶ್, ಉದ್ಯಮ ಘಟಕದ ರಾಜ್ಯಾಧ್ಯಕ್ಷ ಸಂದೇಶ್ ಶೆಟ್ಟಿ, ಕೃಷ್ಣಪ್ಪ, ಸಂತೋಷ್ ಗೌಡ, ಪವನ್ ಶೆಟ್ಟಿ, ಆಟೋ ಘಟಕದ ಜಾನು, ಹರೀಶ್ ಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net