

ಮುಂಡರಗಿ: ಪ್ರತಿದಿನ ನೂರಾರು ಜನ ಬಂದುಹೋಗುವ ಇಲ್ಲಿಯ ಹಳೇ ಎಪಿಎಂಸಿಯಲ್ಲಿನ ತರಕಾರಿ ಮಾರುಕಟ್ಟೆಯು ಸೂಕ್ತ ನಿರ್ವಹಣೆ ಇಲ್ಲದ್ದರಿಂದ ಅವ್ಯವಸ್ಥೆ ತಾಣವಾಗಿ ಮಾರ್ಪಾಡಾಗಿದೆ. ಮಾರುಕಟ್ಟೆ ಆವರಣದಲ್ಲಿ ಹಂದಿ ಹಾವಳಿ, ಗಲೀಜು ವಾತಾವರಣ ಕಂಡುಬರುತ್ತದೆ. ಮೇಲಾಗಿ ಇತ್ತೀಚೆಗೆ ಇಲ್ಲಿ ಕುಡುಕರ ಅಡ್ಡೆಯೂ ರೂಪುಗೊಂಡಿದ್ದು, ಜನಸಾಮಾನ್ಯರು ಹೋಗುವುದೇ ಕಷ್ಟವಾಗಿದೆ.
ಸ್ಥಳೀಯ ಮುಖ್ಯಬಜಾರ್ ಭಾಗ ಹಾಗೂ ಹಳೇ ಎಪಿಎಂಸಿ ಆವರಣ ಹೀಗೆ ಎರಡು ಕಡೆ ತರಕಾರಿ ವ್ಯಾಪಾರ ನಡೆಯುತ್ತದೆ. ಸಾರ್ವಜನಿಕರು ತಮಗೆ ಇಷ್ಟವಾದ ಕಡೆ ಖರೀದಿಸುತ್ತಾರೆ. ಕೆಲವೊಮ್ಮೆ ಮುಖ್ಯ ಬಜಾರ್‌ನಲ್ಲಿ ತಮಗೆ ಬೇಕಾದ ಕಾಯಿಪಲ್ಲೆಗಳು ಸಿಗದೇ ಇದ್ದಾಗ ಅನೇಕರು ಹಳೇ ಎಪಿಎಂಸಿಯಲ್ಲಿ ಸಿಗಬಹುದು ಎಂದು ತೆರಳುತ್ತಾರೆ. ರೈತರು ತಾಜಾ ತರಕಾರಿಯನ್ನು ಮಾರಾಟ ಮಾಡುವುದಕ್ಕೆ ಹಳೇ ಎಪಿಎಂಸಿ ಮಾರುಕಟ್ಟೆಗೆ ಬರುತ್ತಾರೆ. ಹೀಗಾಗಿ ಅನೇಕ ಗ್ರಾಹಕರು ಅಲ್ಲಿಗೇ ಹೋಗಿ ಖರೀದಿಸುವ ವಾಡಿಕೆ ಇದೆ.
ಹಳೇ ಎಪಿಎಂಸಿ ತರಕಾರಿ ಮಾರುಕಟ್ಟೆಯ ದೊಡ್ಡ ಸಮಸ್ಯೆಯೇ ಅನೈರ್ಮಲ್ಯ. ಕಾಲಕಾಲಕ್ಕೆ ತರಕಾರಿ ತ್ಯಾಜ್ಯ ಮತ್ತು ಇತರ ಕಸ ಕಡ್ಡಿಗಳನ್ನು ಸಾಗಿಸದೇ ಇರುವುದರಿಂದ ಅವೆಲ್ಲ ಕೊಳೆತು ದುರ್ನಾತ ಬೀರುತ್ತವೆ. ಹಸಿದ ಹಂದಿಗಳ ಸೈನ್ಯವೇ ಇಲ್ಲಿಗೆ ನುಗ್ಗಿ, ಕಸ ಕಡ್ಡಿಗಳನ್ನು ಎಳೆದಾಡಿ ಮತ್ತಿಷ್ಟು ಗಲೀಜು ಮಾಡುತ್ತಿವೆ. ಇಂಥ ಸ್ಥಳದಲ್ಲಿ ಎಲ್ಲಿ ಹೆಜ್ಜೆ ಇಡಬೇಕು ಎಂದು ಗೊತ್ತಾಗದೇ ಗ್ರಾಹಕರು ಗೊಂದಲಕ್ಕೆ ಈಡಾಗುವುದು ಸಾಮಾನ್ಯವಾಗಿದೆ.
ಕಸ ಮಾತ್ರವಲ್ಲ, ಆವರಣದಲ್ಲಿ ಎಲ್ಲೆಂದರಲ್ಲಿ ಮದ್ಯದ ಪ್ಯಾಕೆಟ್, ಬಾಟಲ್ ಕಾಣುತ್ತವೆ. ಹಳೇ ಎಪಿಎಂಸಿಯು ಕುಡುಕರ ಅಡ್ಡೆಯಾಗಿ ಪರಿಣಮಿಸಿರುವುದಕ್ಕೆ ಬೇಕಾದಷ್ಟು ಸಾಕ್ಷಿಗಳು ಸಿಗುತ್ತವೆ.
ರೈತರು, ವ್ಯಾಪಾರಸ್ಥರು, ಗ್ರಾಹಕರು ಸೇರಿದಂತೆ ಎಲ್ಲರ ಅನುಕೂಲಕ್ಕಾಗಿ ಹಳೇ ಎಪಿಎಂಸಿ ಆವರಣದಲ್ಲಿ 2016ರ ಮೇ ತಿಂಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಯಿತು. ಉಚಿತವಾಗಿ ಪೂರೈಸುವ ಈ ಶುದ್ಧ ನೀರಿನ ಘಟಕದಿಂದ ಬಹಳಷ್ಟು ಜನರಿಗೆ ಪ್ರಯೋಜನವಾಗಿತ್ತು. ಆದರೆ, ಕೆಲ ತಿಂಗಳಿಂದ ಘಟಕ ಬಂದ್ ಅಗಿದೆ. ಕಾಲ ಕಾಲಕ್ಕೆ ನಿರ್ವಹಣೆ ಮಾಡದಿರುವುದರಿಂದ ಘಟಕ ಮೇಲಿಂದ ಮೇಲೆ ದುರಸ್ತಿಗೆ ಬರುತ್ತಿದೆ. ಇತ್ತೀಚೆಗೆ ಮತ್ತೆ ಹಾಳಾಗಿದೆ. ಹೀಗಾಗಿ, ಶುದ್ಧ ನೀರಿನ ನಿರೀಕ್ಷೆ ಹುಸಿಯಾಗಿದೆ.
ಹಳೇ ಎಪಿಎಂಸಿ ಆವರಣದಲ್ಲಿರುವ ತರಕಾರಿ ಮಾರುಕಟ್ಟೆಯು ಕುಡುಕರ ಅಡ್ಡೆಯಾಗಿದ್ದು, ಸ್ವಚ್ಛತೆ ಮರೀಚಿಕೆಯಾಗಿ ಹಂದಿಗಳ ವಾಸಸ್ಥಾನದಂತಾಗಿದೆ. ಇದರಿಂದಾಗಿ ಸಾರ್ವಜನಿಕರು ಈ ಭಾಗದಲ್ಲಿ ಬಂದು ವ್ಯಾಪಾರ ವಹಿವಾಟು ಮಾಡಲು ಹಿಂದೇಟು ಹಾಕುವಂತಾಗಿದೆ. ಸಂಬಂಧಿಸಿದವರು ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕು.ಮುದುಕೇಶ ಬೀಡನಾಳ, ಮಾರುತಿ ಕವಲೂರುವ್ಯಾಪಾರಸ್ಥರು ಹಳೇ ಎಪಿಎಂಸಿಯ ತರಕಾರಿ ಮಾರುಕಟ್ಟೆ ಆವರಣದಲ್ಲಿರುವ ಕಚೇರಿ ಕಟ್ಟಡವು ಖಾಲಿ ಇದ್ದು, ಅಲ್ಲಿ ಕುಡುಕರು ಹಾವಳಿ ಮಾಡಿರಬಹುದು. ಕಟ್ಟಡವನ್ನು ಎಫ್‌ಪಿಒ ಕೇಂದ್ರದವರಿಗೆ ಟೆಂಡರ್ ಮೂಲಕ ಬಾಡಿಗೆ ನೀಡುವ ಪ್ರಕ್ರಿಯೆ ನಡೆದಿದೆ. ಒಂದು ವಾರದಲ್ಲಿ ಶುದ್ಧ ನೀರಿನ ಘಟಕದ ದುರಸ್ತಿಗೊಳಿಸಲಾಗುವುದು.ರವಿ ಹಳ್ಳಿ. ಎಪಿಎಂಸಿ ಕಾರ್ಯದರ್ಶಿ ಮುಂಡರಗಿ