

ಚಿಂತಾಮಣಿ: ಪಾಲಕರೇ ಮಕ್ಕಳನ್ನು ಶಾಲಾ ವಾಹನದಲ್ಲಿ ಕಳುಹಿಸುವ ಮುನ್ನ ಎಚ್ಚರ, ಎಚ್ಚರ... ಖಾಸಗಿ ಶಾಲಾ, ಕಾಲೇಜಿನ ಬಸ್ ಹತ್ತಿಸುವ ಮುನ್ನ ದಾಖಲಾತಿ ಪರಿಶೀಲಿಸಿ.
ಸೋಮವಾರ ನಗರಠಾಣೆಯಲ್ಲಿ ಕರೆದಿದ್ದ ಎಲ್ಲ ಖಾಸಗಿ ಶಾಲಾ, ಕಾಲೇಜು ಮಾಲೀಕರು, ಮುಖ್ಯಸ್ಥರ ಸಭೆಯಲ್ಲಿ ಇಂತಹದೊಂದು ಎಚ್ಚರಿಕೆ ಸಂದೇಶ ಪ್ರತಿಧ್ವನಿಸಿತು.
ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅನುಪಲ್ಲಿ- ಬುರುಡುಗಂಟೆ ಮಧ್ಯೆ ಅ.23ರಂದು ನಗರದ ಖಾಸಗಿ ಶಾಲಾ ವಾಹನ, ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟು, 1 ಮಗು ತೀವ್ರವಾಗಿ ಗಾಯಗೊಂಡ ಘಟನೆ ಬೆನ್ನಲ್ಲೇ ವಾಹನ ಎಫ್ಸಿ, ಇನ್ಶೂರೆನ್ಸ್ ನವೀಕರಿಸದೆ 1 ವರ್ಷದಿಂದ ಓಡಾಡುತ್ತಿರುವುದು ಬಹಿರಂಗಗೊಂಡಿದೆ.
ಈ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು. ಈ ವೇಳೆ ನಗರದ ಬಹುತೇಕ ಖಾಸಗಿ ಶಾಲಾ&ಕಾಲೇಜು ವಾಹನಗಳಿಗೆ ಸರಿಯಾದ ದಾಖಲಾತಿ ಇಲ್ಲದಿರುವುದನ್ನು ಸಹಾಯಕ ಪ್ರಾದೇಶಿಕ ಅಧಿಕಾರಿಯೊಬ್ಬರು ಬಹಿರಂಗಗೊಳಿಸಿದರು.
ಎಆರ್ಟಿಒ ಕಚೇರಿ ಬ್ರೇಕ್ ಇನ್ಸ್ಪೆಕ್ಟರ್ ಪೂಜಾ ಮಾತನಾಡಿ, ಹಲವು ಮಂದಿ ಶಾಲಾ, ಕಾಲೇಜಿನವರು ಗೈರಾಗಿರುವ ಬಗ್ಗೆ ಪ್ರಸ್ತಾಪಿಸಿ, ವಾಹನ ದಾಖಲಾತಿಗಳ ಅವಧಿ ಮೀರಿದ್ದು, ನವೀಕರಿಸಲು ಈಗಾಗಲೇ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿಸಿದರು.
ಶಾಲಾ&ಕಾಲೇಜು ವಾಹನಗಳಿಗೆ ಪ್ರತ್ಯೇಕ ಟ್ಯಾಕ್ಸ್ ಇದೆ. ಬಹುತೇಕ ಕಾಲೇಜಿನವರು ಶಾಲಾ ವಾಹನ ಎಂದು ಟ್ಯಾಕ್ಸ್ ಪಾವತಿ ಮಾಡಿ ಕಾಲೇಜು ಮಕ್ಕಳನ್ನು ಕರೆದೊಯ್ಯತ್ತಿದ್ದಾರೆ. 68ಕ್ಕೂ ಹೆಚ್ಚು ಶಾಲಾ, ಕಾಲೇಜು ವಾಹನಗಳಲ್ಲಿ 58 ವಾಹನಗಳ ಎಫ್ಸಿ ಅವಧಿ, ಹಲವು ವಾಹಗಳ ಇನ್ಶೂರೆನ್ಸ್ ಅವಧಿ ಮುಗಿದಿದೆ, ನೋಟಿಸ್ ನೀಡಿದರೂ ನವೀಕರಣ ಮಾಡಿಲ್ಲ. ಕಾನೂನು ಮೀರಿದ ವಾಹನ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇದೆ.***ಆದರೆ ವಾಹನಗಳು ಶಾಲಾ ಕಾಲೇಜುಗಳಿಂದ ಹೊರಗೆ ಬರಬೇಕು, ಶಾಲಾ ಕಾಲೇಜುಗಳು ಒಳಗಡೆ ಇದ್ದರೆ ಹಿರಿಯ ಅಧಿಕಾರಿಗಳ ಅಪ್ಪಣೆ ಪಡೆಯಬೇಕು. ಮುಟ್ಟುಗೋಲು ಹಾಕಿಕೊಳ್ಳಲು ನೋಟಿಸ್ ನೀಡಿದರೂ ಯಾರೂ ಸ್ಪಂದಿಸಲ್ಲ ಎಂದರು.
ಮಕ್ಕಳ ಬಗ್ಗೆ ಕಾಳಜಿ ಇಲ್ಲವೇ?
ಶಾಲಾ, ಕಾಲೇಜು ವಾಹನಗಳಿಗೆ ಎಫ್ಸಿ, ಇನ್ಶೂರೆನ್ಸ್ ಇಲ್ಲದೆ ವಾಹನ ಚಲಾಯಿಸುವಂತಿಲ್ಲ. ಆದರೂ ನವೀಕರಣ ಮಾಡದೆ ವಾಹನ ಚಲಾಯಿಸುತ್ತಿರುವ ಶಾಲಾ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡ ಡಿವೈಎಸ್ಪಿ ಪಿ.ಮುರಳೀಧರ್ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದರು. ಮಕ್ಕಳನ್ನು ಕುರಿಗಳಂತೆ ತುಂಬುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅದರ ಬದಲು ಒಂದು ಕಂಟೇನರ್ ತಂದು ಅದರಲ್ಲಿ ತುಂಬಿಬಿಡಿ. ಜವಾಬ್ದಾರಿ ಇಲ್ಲದೆ ಶಾಲೆ ನಡೆಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಬಹುತೇಕರು ಕಾನೂನು ಮೀರಿ ವಾಹನ ಚಾಲಾಯಿಸುತ್ತಿದ್ದಾರೆ. ಶಾಲಾ, ಕಾಲೇಜು ಬಳಿ ವಿದ್ಯಾರ್ಥಿಗಳು ವಾಹನಗಳು ತರುವಂತಿಲ್ಲ, ಲೈಸೆನ್ಸ್ ಇಲ್ಲದೆ ಬಹುತೇಕ ಮಂದಿ ವಿದ್ಯಾರ್ಥಿಗಳು ಡಬಲ್, ತ್ರಿಬಲ್ ಕೂರಿಸಿಕೊಂಡು ಹೆಲ್ಮೆಟ್ ಇಲ್ಲದೆ ಚಲಾಯಿಸುತ್ತಾರೆ. ಶಾಲಾ ವಾಹನ ಸೇರಿ ಬಹುತೇಕ ಎಲ್ಲ ಚಾಲಕರು ಸಮವಸ್ತ್ರ ಧರಿಸಲ್ಲ. ಶಾಲೆ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾದ ನೀವೇ ತಪ್ಪು ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ನಗರಠಾಣೆ ಪೊಲೀಸ್ ಇನ್ಸ್ಪೆಕ್ಟರ್ ವಿಜಿಕುಮಾರ್, ಪಿಎಸ್ಐ ರಮೇಶ್, ಎಲ್ಲ ಶಾಲಾ, ಕಾಲೇಜುಗಳು ವಾಹನಗಳ ಮಾಲೀಕರು, ಪ್ರಾಂಶುಪಾಲರು ಇದ್ದರು.