ಎಷ್ಟು ಬಾರಿ ಅನುದಾನ ಕೊಡಬೇಕು?

14SDT1-Web
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದ ಶಾಸಕ ಆನಂದ ಮಾಮನಿ ಅವರನ್ನು ಸನ್ಮಾನಿಸಲಾಯಿತು. ರಾಜಶೇಖರ ಕಾರದಗಿ. ದೀಪಕ ಜಾನ್ವೇಕರ, ಪಿ.ಎಂ.ಚನ್ನಪ್ಪನವರ ಇತರರು ಇದ್ದರು.
Published on

ಸವದತ್ತಿ: ಪಟ್ಟಣದಲ್ಲಿರುವ ಕಲ್ಮಠ ರುದ್ರಭೂಮಿ ಕಾಮಗಾರಿಗೆ ಈಗಾಗಲೇ ಸಾಕಷ್ಟು ಬಾರಿ ಅನುದಾನ ಬಿಡುಗಡೆಗೊಳಿಸಿದರೂ ಸಹ ಕಳಪೆ ಕಾಮಗಾರಿಯಿಂದ ಸರಿಯಾದ ಅಭಿವೃದ್ಧಿಯಾಗಿಲ್ಲ ಎಂದು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳೀಯ ಪುರಸಭೆ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸ್ಮಶಾನ ಭೂಮಿಗಾಗಿ ಅದೆಷ್ಟು ಬಾರಿ ಅನುದಾನ ಬಿಡುಗಡೆ ಮಾಡಬೇಕು? ಶೇ.27 ಕ್ಕಿಂತ ಕೆಳಮಟ್ಟದಲ್ಲಿ ಟೆಂಡರ್ ಕರೆದರೆ ಗುತ್ತಿಗೆದಾರರು ಹೇಗೆ ಕೆಲಸ ಮಾಡಬೇಕು? ಸಿದ್ಧ್ದಪಡಿಸಿದ ಟೆಂಡರ್‌ಗಳನ್ನು ತಿರಸ್ಕರಿಸಲಾಗುವದು ಎಂದರು. ರಾಮಾಪುರ ಸೈಟ್‌ನಲ್ಲಿರುವ ಮಕ್ಕಳ ಉದ್ಯಾನವನದ ಕಾಮಗಾರಿ ಕಳಪೆಯಾಗಿದೆ. ಪುರಸಭೆಯ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ ಎಂದು ಕಿಡಿಕಾರಿದರು.

ಬಾಕಿ ಇರುವ ಮನೆ ಮತ್ತು ನೀರಿನ ಕರ ವಸೂಲಾತಿ ಮತ್ತು ಯಲ್ಲಮ್ಮ ದೇವಸ್ಥಾನದಲ್ಲಿರುವ ವ್ಯಾಪಾರಿ ಮಳಿಗೆಯ ಬಾಡಿಗೆಯ ಕುರಿತು ಶೀಘ್ರ ಕ್ರಮ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ನೂತನವಾಗಿ ಪ್ರಾರಂಭವಾಗಲಿರುವ ಕಾಯಿಪಲ್ಲೆ ಮಾರುಕಟ್ಟೆಯ ಕಾಮಗಾರಿಯಲ್ಲಿ 90 ರಿಂದ 100 ಮಳಿಗೆಗಳಿಗೆ ಅವಕಾಶ ಕಲ್ಪಿಸಿ ಮೂಲಸೌಕರ್ಯಗಳನ್ನು ಒದಗಿಸಿ. ಕಟಕೋಳ ಬ್ಯಾಂಕ್ ಸರ್ಕಲ್ ಹತ್ತಿರದ ಉಳಿದ ಕಾಂಪ್ಲೆಕ್ಸ್ ನಿರ್ಮಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಈಗಾಗಲೇ ಮಾಸ್ಟರ್ ಪ್ಲಾನ್ ರೂಪಿಸಲಾಗಿದ್ದು ಅಧಿಕಾರಿಗಳು ಶೀಘ್ರವೇ ಕಾರ್ಯಪ್ರವೃತ್ತರಾಗಿ ಎಂದರು.

ಇದೇ ಸಂದರ್ಭದಲ್ಲಿ 2ನೇ ಬಾರಿಗೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದ ಶಾಸಕ ಆನಂದ ಮಾಮನಿ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ, ಉಪಾಧ್ಯಕ್ಷ ದೀಪಕ ಜಾನ್ವೇಕರ, ಮುಖ್ಯಾಧಿಕಾರಿ ಪಿ.ಎಂ.ಚನ್ನಪ್ಪನವರ, ಸದಸ್ಯರಾದ ಶಿವಾನಂದ ಹೂಗಾರ, ಮೌಲಾಸಾಬ್ ತಬ್ಬಲಜಿ, ಅರ್ಜುನ ಅಮೋಜಿ, ಯಲ್ಲಪ್ಪ ರುದ್ರಾಕ್ಷಿ, ವೀರೇಂದ್ರ ಪ್ರಭುನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net