ಎಷ್ಟು ದಿನವಾಯಿತು ರಸ್ತೆ ಬಂದ್ ಮಾಡಿ?

22sirsi3
Published on

ಶಿರಸಿ: ಶಿರಸಿ-ಕುಮಟಾ ರಸ್ತೆ ಅರಣ್ಯ ಜಾಗಕ್ಕೆ ಬದಲಿಯಾಗಿ ವಿಜಯಪುರದಲ್ಲಿ ಜಾಗ ಕೊಟ್ಟಿದ್ದೇವೆ. ಯಾವುದೇ ಸಮಸ್ಯೆ ಇಲ್ಲದಿದ್ದರೂ ಅನಗತ್ಯವಾಗಿ ವಿಳಂಬ ಮಾಡಿದ್ದೀರಿ ಎಂದು ರಾಷ್ಟ್ರೀಯ ಹೆದ್ದಾರಿ 766ಇ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ರಾಗಿಹೊಸಳ್ಳಿ ಬಳಿ ಮಂಗಳವಾರ ವೀಕ್ಷಿಸಿದ ಅವರು, ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರುತ್ತಿದೆ. ಕಾಮಗಾರಿ ಮಾಡುವವರು ನೀವು, ಜನ ನಮ್ಮನ್ನೇ ಕೇಳ್ತಾರೆ. ಜನರಿಗೆ ಏನಂತ ಉತ್ತರ ಹೇಳಲಿ ? ನಮಗೆ ಏನೂ ಹೇಳಲು ಧ್ವನಿ ಉಳಿದಿಲ್ಲ ಎಂದು ಬೇಸರಿಸಿದರು.

ನೀವು ಹೇಳದಾಗೆಲ್ಲ ವಾಹನ ಸಂಚಾರ ಬಂದ್ ಸಹ ಮಾಡಿಕೊಟ್ಟಿದ್ದೇವೆ. ಇನ್ನೇನು ಮಾಡಲು ಸಾಧ್ಯ? ಎಷ್ಟು ದಿನವಾಯಿತು ರಸ್ತೆ ಬಂದ್ ಮಾಡಿ? ಜನ ಮೇಲಿಂದ ಹಾರಿಕೊಂಡ ಹೋಗಲು ಆಗುತ್ತಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹೆದ್ದಾರಿಯಲ್ಲಿ 4ಕಿಮೀ ಮಾತ್ರ ಭೂಸ್ವಾದೀನ ಸಮಸ್ಯೆ ಇತ್ತು. ಅದನ್ನು ಬಿಟ್ಟು ಉಳಿದೆಡೆ ಕಾಮಗಾರಿ ವೇಗದಿಂದ ಮಾಡಬಹುದಿತ್ತಲ್ವಾ ? ಸೇತುವೆ ಕಾಮಗಾರಿ ಕೈಗೊಳ್ಳುವಲ್ಲಿ ಭೂಸ್ವಾದೀನದ ಅವಶ್ಯಕತೆಯಿರಲಿಲ್ಲ. ಪ್ಲ್ಯಾನ್ ಮಾಡಿ ಮಾಡದರೆ ಯಾವುದೂ ಅಸಾಧ್ಯವಿಲ್ಲ. ಕಾಂಕ್ರಿಟ್ ರಸ್ತೆ ಆಗಿದ್ದರಿಂದ ಅಲ್ಪಸ್ವಲ್ಪ ಮಳೆ ಬಂದರೂ ತೊಂದರೆ ಇರಲಿಲ್ಲ. ಇನ್ನು ಮಳೆಗಾಲ ಆರಂಭವಾಗಿದ್ದರಿಂದ ಸೆಪ್ಟೆಂಬರ್‌ವರೆಗೆ ಹೆದ್ದಾರಿ ಸ್ಥಿತಿ ಹೀಗೆ ಇರಬಹುದು ಎಂದು ಅಸಮಾಧಾನ ತೋಡಿಕೊಂಡರು.

ತೀವ್ರ ವಿರೋಧವಿದ್ದರೂ ನಾವೆಲ್ಲ ಪ್ರಯತ್ನಿಸಿ ವಾಹನ ಸಂಚಾರ ಬಂದ್ ಮಾಡಿಕೊಟ್ಟಿದ್ದೆವು. ಆದರೂ ಕಾಮಗಾರಿ ಮಾತ್ರ ವೇಗದಲ್ಲಿ ಮಾಡಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ಸಚಿವರ ಗಮನಕ್ಕೆ ತಂದರು.

55ಕಿಮೀ ಹೆದ್ದಾರಿಯಲ್ಲಿ 44ಕಿಮೀ ಕಾಮಗಾರಿ ಮುಗಿದಿದೆ. ಇನ್ನು 11ಕಿಮೀ ಬಾಕಿಯಿದೆ. ಹಾಗೇ ಸೇತುವೆ ರಿಟೆನಿಂಗ್ ವಾಲ್ ನಿರ್ಮಾಣ ಶೇ.5ರಷ್ಟು ಆಗಿದೆ ಎಂದು ಆರ್‌ಎನ್‌ಎಸ್ ಅಧಿಕಾರಿಗಳು ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಉಪವಿಭಾಗಾಧಿಕಾರಿ ಕೆ.ವಿ. ಕಾವ್ಯಾರಾಣಿ ಇತರರು ಇದ್ದರು.

ಒಪ್ಪಂದ ಇರಲಿಲ್ಲ...

ಗುತ್ತಿಗೆದಾರರಿಗೆ 2021ರಲ್ಲಿಯೇ ವರ್ಕ್ ಆರ್ಡರ್ ನೀಡಲಾಗಿದೆ. 2022ರ ಡಿಸೆಂಬರ್‌ನಲ್ಲಿ ಕಾಮಗಾರಿ ಮುಗಿಸಬೇಕಿತ್ತು. ಈಗಾಗಲೇ ಮೂರು ವರ್ಷ ವಿಳಂಬವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕುತ್ತರಿಸಿದ ಆರ್‌ಎನ್‌ಎಸ್ ಅಧಿಕಾರಿಗಳು, ದೇವಿಮನೆ ಘಟ್ಟದಲ್ಲಿ 18 ಮೀಟರ್ ಅಗಲ ಮಾಡುವುದಕ್ಕೆ ಅವಕಾಶವಾಗದೇ 12.5ಮೀ ಅಗಲ ಮಾಡಲು ಅವಕಾಶ ದೊರೆತಿದೆ. ಹೀಗಾಗಿ ಟ್ರಾಫಿಕ್ ಡೈವರ್ಸನ್ ಮಾಡಿ ಕಾಮಗಾರಿ ನಡೆಸುವುದು ಅನಿವಾರ್ಯವಾಗಿತ್ತು ಎಂದರು. ಇದಕ್ಕೆ ಗರಂ ಆದ ಸಚಿವ ಮಂಕಾಳ ವೈದ್ಯ ಕಾಮಗಾರಿ ಗುತ್ತಿಗೆ ಪಡೆಯುವಾಗ ಸರ್ವೇ ಮಾಡಿರಲಿಲ್ಲವೇ ? ಗುತ್ತಿಗೆ ಒಪ್ಪಂದದಲ್ಲಿ ರಸ್ತೆ ಬಂದ್ ಮಾಡಿಕೊಡುವ ಪ್ರಸ್ತಾಪ ಇತ್ತಾ ? ಒಪ್ಪಂದ ಇದ್ದಿದ್ದರೆ ನನಗೆ ತೋರಿಸಿ ನೋಡೋಣ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net