ಸಂಕ್ರಾಂತಿ ನಂತರ ಗ್ರಹಗತಿ ಪ್ರಭಾವ ಹೇಗಿದೆ? ರಾಜಗುರು ಬಿ.ಎಸ್.ದ್ವಾರಕಾನಾಥ್ ಭವಿಷ್ಯ

Rajaguru Dwarakanath
Published on

ಭಾರತೀಯ ಪಂಚಾಂಗದ ಪ್ರಕಾರ ಸೂರ್ಯನು ತನ್ನ ಪಥವನ್ನು ಬದಲಿಸಿ ಮಕರ ರಾಶಿಯನ್ನು ಪ್ರವೇಶಿಸುವ ಉತ್ತರಾಯಣವನ್ನು ಪುಣ್ಯಕಾಲ ಎಂದು ಬಣ್ಣಿಸಲಾಗುತ್ತದೆ. ಉತ್ತರಾಯಣವು ಉತ್ತರೋತ್ತರ ಅಭಿವೃದ್ಧಿಯ ಪರ್ವಕಾಲವಾಗಿದ್ದು, ಮಕರ ಸಂಕ್ರಾಂತಿ ನಿಸರ್ಗದಲ್ಲಿ ಹೊಸ ಉತ್ಸಾಹವನ್ನು ತುಂಬುತ್ತದೆ.

| ರಾಜಗುರು ಬಿ.ಎಸ್.ದ್ವಾರಕಾನಾಥ್

Dwarakanath
ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ದಿಕ್ಕನ್ನು ಬದಲಿಸುವ ಮೂಲಕ ಭರತ ಖಂಡದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯುವ ಪರ್ವಕಾಲ ಈ ಸಂಕ್ರಾಂತಿ. ಕಲೆ, ಅಧ್ಯಾತ್ಮ, ಧರ್ಮ, ಸಂಸ್ಕಾರ ಮತ್ತು ಶ್ರಮಿಕರಿಂದ ಪೂರ್ಣಗೊಂಡಿರುವ ಭರತಖಂಡದ ಅಭಿವೃದ್ಧಿಗೆ ಉತ್ತರಾಯಣವು ಪ್ರಮುಖ ಕಾಲ. ಕತ್ತಲನ್ನು ನಿವಾರಿಸಿ ಬೆಳಕನ್ನು ನೀಡುವ ಸೂರ್ಯನ ಆರಾಧನೆಗೆ ಸಂಕ್ರಾಂತಿ ಶ್ರೇಷ್ಠ ಕಾಲ. ಉತ್ತ ರಾಯಣದಲ್ಲಿ ಮಾಘ, ಫಾಲ್ಗುಣ, ಚೈತ್ರ, ವೈಶಾಖ, ಜೇಷ್ಠ ಐದು ಮಾಸಗಳು ಬರಲಿದ್ದು ನಾಮಕರಣ, ವಿವಾಹ ಇತ್ಯಾದಿ ಶುಭಕಾರ್ಯಗಳು ಈ ಅವಧಿಯಲ್ಲಿ ನಡೆಯುತ್ತವೆ.

ಸಂಕ್ರಾಂತಿಯಂದು ಸೂರ್ಯನ ಕಿರಣಗಳ ಪ್ರಖರತೆ ಸಹಸ್ರ ಸಂಖ್ಯೆಯಲ್ಲಿ ಹೆಚ್ಚಾಗಲಿದ್ದು, ಅದರಿಂದ ಐದು ತಿಂಗಳ ಕಾಲ ಭೂಮಿಯ ಮೇಲಿನ ಮಳೆ-ಬೆಳೆ ನಿರ್ಣಯವಾಗಲಿದೆ. ವೈಜ್ಞಾನಿಕ ಹಿನ್ನೆಲೆಯಲ್ಲಿ ನೋಡಿದರೂ ಸೂರ್ಯನ ಕಿರಣಗಳಿಗೆ ಆರೋಗ್ಯವೃದ್ಧಿಸುವ ಶಕ್ತಿ ಇದ್ದು, ಆದಿತ್ಯನ ಆರಾಧನೆಯಿಂದ ಸರ್ವರೋಗಗಳು ನಾಶವಾಗುತ್ತವೆ. ಆ ಕಾರಣಕ್ಕೆ ಸಂಕ್ರಾಂತಿಯಂದು ಸೂರ್ಯ ಮಂಡಲವನ್ನಿಟ್ಟು ಪೂಜೆ ಮಾಡಿ ಸೂರ್ಯನಾರಾಯಣನ ಪಾರಾಯಣ ಮಾಡಬೇಕು. ಅಂದು ರುದ್ರನನ್ನು ಪೂಜಿಸಿ, ಕಬ್ಬಿನ ಹಾಲಿನ ಅಭಿಷೇಕ ಮಾಡಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ. ಸಂಕ್ರಾಂತಿಯಂದು ವಿಶೇಷವಾಗಿ ಹೆಸರುಬೇಳೆಯ ಹುಗ್ಗಿ (ಪೊಂಗಲ್) ಮಾಡಿ ತುಪ್ಪದೊಂದಿಗೆ ನೈವೈದ್ಯ ಮಾಡಬೇಕು. ಹಾಗೂ ಸೂರ್ಯನಿಗೆ ಪ್ರಿಯವಾದ ಗೋಧಿಯನ್ನು ದಾನ ನೀಡುವುದು ಶ್ರೇಷ್ಠ. ಈ ಬಾರಿ ಜನವರಿ 15ರಂದು ಸಂಕ್ರಾಂತಿ ಬಂದಿದ್ದು, ಬೆಳಗ್ಗೆ 8.30ರ ನಂತರ ಪುಣ್ಯಕಾಲವಿದ್ದು, ಆ ವೇಳೆಯಲ್ಲಿ ಪೂಜೆ ಮಾಡಬೇಕು.

ಎಳ್ಳುಬೆಲ್ಲ ತಿಂದು ಒಳ್ಳೇ ಮಾತಾಡಿ

ಸಂಕ್ರಾಂತಿಯಂದು ಎಳ್ಳುಬೆಲ್ಲವನ್ನು ನೀಡುವುದು ಸಂಪ್ರದಾಯ. ‘ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತಾಡಿ’ ಎಂಬ ಉಕ್ತಿಯಂತೆ ಸಂಕ್ರಾಂತಿಯಂದು ಅಪ್ರಿಯ, ಅಸತ್ಯ, ಏಕವಚನದಲ್ಲಿ ಮಾತನಾಡಬಾರದೆಂಬ ನಿಯಮವಿದೆ. ಸಹಸ್ರ ಪಾಪವನ್ನು ನಾಶ ಮಾಡುವ ಶಕ್ತಿ ಎಳ್ಳಿನಲ್ಲಿದೆ. ಎಳ್ಳು ಶನೈಶ್ಚರನಿಗೂ ಪ್ರಿಯವಾದುದ್ದು. ಸಂಕ್ರಾಂತಿಯಂದು ಪಿತೃಗಳಿಗೆ ಎಳ್ಳು-ನೀರಿನ ತರ್ಪಣ ನೀಡಿ, ಕಾವೇರಿ ನದಿಯಲ್ಲಿ ತೀರ್ಥಸ್ನಾನ ಮಾಡಿದರೆ ಜನ್ಮಾಂತರದ ಪಾಪಗಳು ನಾಶವಾಗುತ್ತವೆ ಎನ್ನಲಾಗುತ್ತದೆ. ಸಂಕ್ರಾಂತಿಯಂದು ಮನೆಯಲ್ಲಿ ಎಳ್ಳೆಣ್ಣೆ ದೀಪವನ್ನು ಬೆಳಗುವುದರಿಂದ ಜೀವನ ಪ್ರಕಾಶಮಾನವಾಗುತ್ತದೆ.

ರಾಮನ ಸ್ವಾಗತಕ್ಕೆ ಸೂರ್ಯನ ಆಗಮನ

ಸಂಕ್ರಾಂತಿ ಪ್ರತಿವರ್ಷಕ್ಕಿಂತ ಈ ವರ್ಷ ಮತ್ತಷ್ಟು ವಿಶೇಷವಾಗಿದೆ. ಜನವರಿ 22ರಂದು ಕೋಟ್ಯಂತರ ಭಕ್ತರ ಅಭಿಲಾಷೆಯಂತೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆಯಾಗುತ್ತಿದ್ದು, ಶ್ರೀರಾಮನ ಸ್ವಾಗತಕ್ಕೆ ಸೂರ್ಯ ಉತ್ತರಾಯಣದಲ್ಲಿ ಆಗಮಿಸುತ್ತಿದ್ದಾನೆ. ರಾಮಾಯಣದಲ್ಲಿ ಉಲ್ಲೇಖಗೊಂಡಿರುವಂತೆ; ದಕ್ಷಿಣದಲ್ಲಿ ರಾಕ್ಷಸರನ್ನು ಸಂಹರಿಸಿದ ಶ್ರೀರಾಮ ಉತ್ತರದಲ್ಲಿ ಯಾವಾಗ ಪ್ರತಿಷ್ಠಾಪನೆಗೊಳ್ಳುತ್ತಾನೆಯೋ ಅಂದಿನಿಂದ ಭಾರತಕ್ಕೆ ಸತ್ಯಯುಗದ ಬೆಳಕು ಪ್ರಜ್ವಲಿಸಲು ಆರಂಭವಾಗುತ್ತದೆ. ಅಂತೆಯೇ ಈ ಮಕರ ಸಂಕ್ರಾಂತಿಯಿಂದ ಅಯೋಧ್ಯೆಯಲ್ಲಿ ಆರಂಭಗೊಳ್ಳುವ ಕಾರ್ಯಕ್ರಮದ ಮೂಲಕ ಭಾರತದ ಉತ್ತರೋತ್ತರ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ಕಳೆದ 70 ವರ್ಷಗಳಲ್ಲಿ ಸಾಧ್ಯವಾಗದ್ದು ಮಹಾನ್ ನಾಯಕರಾದ ಪ್ರಧಾನಿ ನರೇಂದ್ರ ಮೋದಿಯವರ ಕಾಲದಲ್ಲಿ ಸಾಧ್ಯವಾಗಿದೆ.

ಚುನಾವಣೆಯ ಮೇಲೆ ಗ್ರಹಗತಿ ಪ್ರಭಾವ

ಸಂಕ್ರಾಂತಿ ನಂತರ ಉಂಟಾಗುವ ಗ್ರಹಗಳ ಚಲನೆಯು ಮುಂಬರುವ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ. ಪ್ರಜಾಪಾಲನೆಯಲ್ಲಿ ಪ್ರಮುಖನಾಗಿರುವ ಶನಿಯು ಕುಂಭರಾಶಿಯಲ್ಲಿದ್ದು, ಫೆಬ್ರವರಿ 15ರ ನಂತರ ಯಾವಾಗಲಾದರೂ ಚುನಾವಣೆ ಘೋಷಣೆಯಾಗಬಹುದು. ವಿರುದ್ಧ ಗ್ರಹಗಳಾದ ಸೂರ್ಯ ಮತ್ತು ಶನಿ ಒಂದೇ ರಾಶಿಯಲ್ಲಿ ಇರುವುದರ ಪರಿಣಾಮವಾಗಿ ಜನತೆಯಲ್ಲಿ ದ್ವಂದ್ವ ಮನಸ್ಥಿತಿ ನಿರ್ವಣವಾಗುವ ಸಾಧ್ಯತೆ ಇದೆ. ಈ ಗೊಂದಲದ ಪರಿಸ್ಥಿತಿಯಿಂದ ದೇಶದಲ್ಲಿ ಅಶಾಂತಿಗೆ ಕಾರಣವಾಗಬಹುದು. ನರೇಂದ್ರ ಮೋದಿಯವರ ಜನಪ್ರಿಯತೆ ಪ್ರಮಾಣ ಕುಸಿಯುವ ಛಾಯೆ ಕಂಡುಬರುತ್ತಿದೆ. ದೇಶದ ಅಭಿವೃದ್ಧಿಗೆ ಕಳೆದ 10 ವರ್ಷದಿಂದ ಸಾಕಷ್ಟು ಸೇವೆ ಸಲ್ಲಿಸಿದ್ದರೂ, ಮಾಡಿರುವ ಕೆಲಸಗಳಿಗಿಂತ ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಸ್ಪಷ್ಟನೆ ನೀಡಿದರೆ ಜನರಿಗೆ ಹೊಸ ಭರವಸೆ ಮೂಡಬಹುದು. ಅದರಿಂದ ಚುನಾವಣೆಯಲ್ಲಿ ಲಾಭವಾಗಬಹುದು. ರಾಷ್ಟ್ರನಾಯಕರಿಗೆ ಅಪಾಯದ ಮುನ್ಸೂಚನೆ ಕಂಡುಬರುತ್ತಿದ್ದು, ಬೇಹುಗಾರಿಕೆಯನ್ನು ಬಲಪಡಿಸುವ ಅಗತ್ಯವಿದೆ. ದ್ವಾದಶ ರಾಶಿಗಳ ಮೇಲೆಯೂ ಶನಿ ಮತ್ತು ಸೂರ್ಯನ ಪ್ರಭಾವವಿದ್ದು, ಶಿವನ ಆರಾಧನೆಯಿಂದ ಪರಿಹಾರ ಕಾಣಬಹುದು.

ಅಗ್ನಿ ಅವಘಡ, ರೈಲು, ವಿಮಾನ ದುರಂತಗಳು ಸಂಭವಿಸಲಿದ್ದು, ಸ್ಪೋಟ, ದವಸ-ಧಾನ್ಯಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಉತ್ತಮ ಮಳೆ-ಬೆಳೆ ಆಗಲಿದ್ದು, ಈ ಹಿಂದೆ ಜಾಗತಿಕ ಮಟ್ಟದಲ್ಲಿ ಆಗುವ ಕೆಲ ಅವಘಡಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದು, ಇತ್ತೀಚೆಗೆ ಜಪಾನ್​ನಲ್ಲಿ ನಡೆದ ಭೂಕಂಪ ಮತ್ತು ವಿಮಾನ ದುರಂತಗಳು ಅದಕ್ಕೆ ಸಾಕ್ಷಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net