

ಶಿವಮೊಗ್ಗ: ದೇಶದಲ್ಲಿ ರಕ್ಷಣಾ ಮತ್ತು ರೈಲ್ವೆ ಇಲಾಖೆಯನ್ನು ಬಿಟ್ಟರೆ ಮೂರನೇ ಅತಿದೊಡ್ಡ ಭೂಮಿಯನ್ನು ಹೊಂದಿರುವುದು ವಕ್ಫ್ ಬೋರ್ಡ್. 4.5 ಲಕ್ಷ ಎಕರೆ ಇದ್ದ ಆಸ್ತಿ ಇದೀಗ 9 ಲಕ್ಷ ಎಕರೆಗೆ ಏರಿದೆ. ಕೇವಲ ಹತ್ತೇ ವರ್ಷದಲ್ಲಿ ಶೇ.135ರಷ್ಟು ಆಸ್ತಿ ಹೆಚ್ಚಳವಾಗಿರುವ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು.
ದೇಶದಲ್ಲಿ 1.50 ಲಕ್ಷ ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಯನ್ನು ಹೊಂದಿದೆ. 2009ರಲ್ಲಿ ವಕ್ಫ್ ಆಸ್ತಿ 4.50 ಲಕ್ಷ ಎಕರೆ ಇತ್ತು. ಈ ಆಸ್ತಿಗಳು ದುಪ್ಪಟ್ಟು ಆಗಿದ್ದು ಹೇಗೆ ಎಂಬುದು ಪ್ರಶ್ನೆ ಮೂಡಿಸಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದಾರೆ. ಇದನ್ನರಿತ ಸಚಿವ ಜಮೀರ್ ಅಹಮ್ಮದ್ ಖಾನ್ ರಾಜ್ಯದೆಲ್ಲೆಡೆ ರೈತರು, ಮಠ ಮಂದಿರಗಳು, ದೇವಸ್ಥಾನಗಳ ಆಸ್ತಿಯನ್ನೂ ವಕ್ಫ್ ಆಸ್ತಿಯನ್ನಾಗಿ ಬದಲಾಯಿಸುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕರ್ನಾಟಕದಲ್ಲಿ 68 ಸಾವಿರಕ್ಕೂ ಹೆಚ್ಚು ವಕ್ಫ್ ಆಸ್ತಿ ಇದೆ. 29 ಸಾವಿರ ಎಕರೆ ಭೂಮಿಯನ್ನು ಕಂದಾಯದಿಂದ ವಾಣಿಜ್ಯಕ್ಕೆ ಬದಲಾಯಿಸಲಾಗಿದೆ. ವಕ್ಫ್ ಹೆಸರಲ್ಲಿ ಕಮರ್ಷಿಯಲ್ ಆಸ್ತಿಯನ್ನು ಕಾಂಗ್ರೆಸ್ ನಾಯಕರು ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ಕೊಟ್ಟಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮಾತ್ರವಲ್ಲದೆ, ದೇಶದಲ್ಲಿ ಅನೇಕ ಕಡೆ ವಕ್ಫ್ ಆಸ್ತಿ ಮಾಡಲು ಹೊರಟಿದ್ದಾರೆ. ಇದಕ್ಕೆ ಕಾರಣವಾಗಿರುವ ಸಚಿವ ಜಮೀರ್ ಅಹಮ್ಮದ್ ಖಾನ್ ತಕ್ಷಣ ರಾಜೀನಾಮೆ ಕೊಡಬೇಕು. ಸಮಗ್ರ ತನಿಖೆ ಆಗಬೇಕು. ಹಿಂದುಗಳ ಆಸ್ತಿಯನ್ನು ವಕ್ಫ್ ಸಮಿತಿ ಕಬಳಿಕೆ ಮಾಡುತ್ತಿದೆ ಎಂದು ಆರೋಪಿಸಿದರು.