ಅಧಿಕಾರಿಗಳಿಲ್ಲದೆ ಜನಸ್ಪಂದನೆ ಹೇಗೆ?

how-can-people-respond-without-officials
ರಬಕವಿ ಬನಹಟ್ಟಿ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಜನಸ್ಪಂದನ ಸಮಾರಂಭದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು. ತಹಸೀಲ್ದಾರ್ ಗಿರೀಶ ಸ್ವಾದಿ, ತೇರದಾಳ ತಹಸೀಲ್ದಾರ್ ವಿಜಯಕುಮಾರ ಕಡಕೋಳ ಇದ್ದರು.
Published on

ರಬಕವಿ-ಬನಹಟ್ಟಿ: ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಜನಸ್ಪಂದನೆ ಸಭೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಬಾರದೆ ಕಾಟಾಚಾರಕ್ಕೆ ಎಂಬಂತೆ ಸಿಬ್ಬಂದಿಯನ್ನು ಕಳಿಸಿದರೆ ಜನರ ಸಮಸ್ಯೆಗಳು ಪರಿಹಾರವಾಗುವುದಾದರೂ ಯಾವಾಗ? ಎಂದು ಶಾಸಕ ಸಿದ್ದು ಸವದಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರಬಕವಿ-ಬನಹಟ್ಟಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಜನಸ್ಪಂದನ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರಣ್ಯ ಇಲಾಖೆಯ ಜಾಗ ಡಿಫಾರೆಸ್ಟ್ ಆಗಿದೆ. ಆ ಸ್ಥಳಗಳಲ್ಲಿ ಕೆಎಚ್‌ಡಿಸಿ ನೇಕಾರ ಮನೆಗಳು ಸೇರಿದಂತೆ ಅನೇಕ ಮನೆಗಳಿವೆ. ಅವುಗಳಿಗೆ ಹಕ್ಕುಪತ್ರ ಕೊಡಬೇಕು. ಇನ್ನೂ ಯಾಕೆ ಕೊಟ್ಟಿಲ್ಲ? ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಆದರೆ ಅಧಿಕಾರಿಗಳು ಬಾರದೆ ತಮ್ಮ ಕೈ ಕೆಳಗಿನ ನೌಕರನನ್ನು ಕಳಿಸಿದರೆ ಸಮಸ್ಯೆ ಹೇಗೆ ಪರಿಹಾರವಾಗುತ್ತದೆ? ಅವರೆಲ್ಲಿ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು.

ಕಳೆದ ತಿಂಗಳು ಜರುಗಿದ ಜನಸ್ಪಂದನ ಸಭೆಯಲ್ಲಿ ಒಟ್ಟು 162 ಅರ್ಜಿಗಳಲ್ಲಿ ಎಷ್ಟು ಸಮಸ್ಯೆಗೆ ಇತ್ಯರ್ಥ ಮಾಡಿದ್ದೀರಿ ಎಂದು ತಹಸೀಲ್ದಾರ್‌ಗೆ ಶಾಸಕರು ಪ್ರಶ್ನಿಸಿದರು. ಎಲ್ಲ 162 ಅರ್ಜಿದಾರರ ಸಮಸ್ಯೆಗಳು ಇತ್ಯರ್ಥವಾಗಿವೆ ಎಂದು ತಹಸೀಲ್ದಾರ್ ಗಿರೀಶ ಸ್ವಾದಿ ಉತ್ತರಿಸಿದರು.

ಮಹಾಲಿಂಗಪುರ ನಗರದ ಕೆಂಗೇರಿಮಡ್ಡಿಯಲ್ಲಿ ವಾಸಿಸುವ 220 ಪರಿವಾರಕ್ಕೆ ಕಳೆದ ಎರಡು ವರ್ಷಗಳಿಂದ ಹಕ್ಕುಪತ್ರ ನೀಡಿಲ್ಲ. ಪ್ರತಿ ಜನಸ್ಪಂದನ ಸಭೆಯಲ್ಲಿ ನಮ್ಮ ಸಮಸ್ಯೆ ಹೇಳುತ್ತೇವೆ ಎಂದು ಅಲ್ಲಿನ ವಾರ್ಡ್ ಸದಸ್ಯರು ಹೇಳಿದರು. ಅದಕ್ಕೆ ಶಾಸಕರು ಎಲ್ಲ ಅರ್ಜಿಗಳ ಸಮಸ್ಯೆಗಳು ಪರಿಹಾರವಾಗಿವೆ ಎನ್ನುತ್ತೀರಿ. ಹೀಗೇನಾ ಕೆಲಸ ಮಾಡೋದು? ಎಂದು ಪ್ರಶ್ನಿಸಿದರು. 15 ದಿನಗಳಲ್ಲಿ ಸಮಸ್ಯೆಗೆ ಪರಿಹಾರ ನೀಡುತ್ತೇವೆ ಎಂದು ತಹಸೀಲ್ದಾರ್ ಪ್ರತಿಕ್ರಿಯಿಸಿದರು.

ಮದನಮಟ್ಟಿ ಪುನರ್ವಸತಿ ಕೇಂದ್ರ ಪ್ರದೇಶದಲ್ಲಿ ಲೋಕೋಪೋಯೋಗಿ ಇಲಾಖೆಯ 8 ಎಕರೆಯಷ್ಟು ಜಾಗ ಖಾಲಿಯಿದೆ. ಅದನ್ನು ನಗರಸಭೆಯವರು ತಮ್ಮ ಸುಪರ್ದಿಗೆ ಪಡೆದುಕೊಂಡು ಅನೇಕ ಕುಟುಂಬಗಳಿಗೆ 1+2 ಯೋಜನೆಯಡಿ ಆಶ್ರಯ ಮನೆಗಳನ್ನು ನೀಡಬೇಕು. ಜಗದಾಳ ರಸ್ತೆಯಲ್ಲಿ ಸರ್ಕಾರಿ ಜಾಗ ಖಾಲಿ ಬಿದ್ದಿದೆ. ಅದನ್ನು ಮತ್ತ್ಯಾರೋ ಅಕ್ರಮ ಮಾಡಿಕೊಳ್ಳುವುದರೊಳಗಾಗಿ ಸರ್ಕಾರಿ ಪಶು ಆಸ್ಪತ್ರೆಗೆ ಬಳಸಿದರೆ ಸೂಕ್ತವಾಗುತ್ತದೆ. ಹೀಗೆ ಹತ್ತು ಹಲವು ಸಮಸ್ಯೆಗಳು ತಾಲೂಕು ವಾಪ್ತಿಯಲ್ಲಿವೆ. ಅಧಿಕಾರಿಗಳು ಸೇವಾ ಮನೋಭಾವದಿಂದ ಕೆಲಸ ಮಾಡಿದರೆ ಕಡುಬಡವರು ನಿಮ್ಮನ್ನು ನೆನೆಯುತ್ತಾರೆ. ವೃತ್ತಿ ಜೀವನ ಸಾರ್ಥಕವಾಗಲು ಕಾನೂನಿನಡಿಯಲ್ಲಿ ಸಾರ್ವಜನಿಕರ ಸೇವೆ ಮಾಡಿ ನಿಮ್ಮ ಸೇವಾ ವೃತ್ತಿಯಲ್ಲಿ ಗೌರವ ಸಂಪಾದಿಸಿಕೊಳ್ಳಿ ಎಂದು ಶಾಸಕ ಸವದಿ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಪತಿ ನಿಧನವಾಗಿ ಎರಡು ವರ್ಷವಾದರೂ ಪರಿಹಾರದ ಹಣ ಬಂದಿಲ್ಲ. ಜಮೀನು ಖರೀದಿಸಿದ ಬಳಿಕ ಖರೀದಿದಾರರ ಪರವಾಗಿ ಪಹಣಿ ಬರುತ್ತಿಲ್ಲ. ನಮ್ಮ ಸಮುದಾಯಕ್ಕೆ ಸಮುದಾಯ ಭವನ ನೀಡಿ ಹೀಗೆ ಹತ್ತು ಹಲವು ಸಮಸ್ಯೆಗಳ ಕುರಿತಾದ ಅರ್ಜಿಗಳು ಹರಿದು ಬಂದವು. ರಬಕವಿ ನಗರದ ಅನೇಕ ಹೊಸ ಬಡಾವಣೆಗಳಲ್ಲಿ ಸಾರ್ವಜನಿಕ ಜಾಗ ಬಳಕೆಗೆ ಇದ್ದು, ಅಲ್ಲಿ ಸಮುದಾಯ ಭವನ ನಿರ್ಮಿಸಬೇಕು ಎಂದು ರಬಕವಿ ಮಲ್ಲಿಕಾರ್ಜುನ ಸಮಸ್ತ ದೈವ ಮಂಡಳಿಯವರು ಅರ್ಜಿ ಸಲ್ಲಿಸಿದರು. ಅದಕ್ಕೆ ಉತ್ತರಿಸಿದ ಅಧಿಕಾರಿಗಳು ಶೀಘ್ರದಲ್ಲಿ ಸ್ಥಳ ಪರಿಶೀಲಿಸಲಾಗುವುದು ಎಂದರು.

ಒಟ್ಟು 16 ಅರ್ಜಿ ಸಲ್ಲಿಕೆಯಾಗಿದ್ದವು. ಸ್ಥಳದಲ್ಲಿಯೇ ಮೂರು ಅರ್ಜಿಗಳಿಗೆ ಪರಿಹಾರ ದೊರಕಿಸಲಾಯಿತು. ಉಳಿದ ಎಲ್ಲ ಸಮಸ್ಯೆಗಳಿಗೆ ಒಂದು ವಾರದೊಳಗೆ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಪೋರ್ಟಲ್‌ನಲ್ಲಿ ಕಳಿಸಲಾಗುವುದು. 30 ದಿನಗಳಲ್ಲಿ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಅಧಿಕಾರಿಗಳು ಭರವಸೆ ನೀಡಿದರು.

ತಹಸೀಲ್ದಾರ್ ಗಿರೀಶ ಸ್ವಾದಿ, ತೇರದಾಳ ತಹಸೀಲ್ದಾರ್ ವಿಜಯಕುಮಾರ ಕಡಕೋಳ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಿ., ಪೌರಾಯುಕ್ತ ಜಗದೀಶ ಈಟಿ, ಗ್ರಾಮಲೆಕ್ಕಾಧಿಕಾರಿ ಸದಾಶಿವ ಕುಂಬಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net