

ಹೂವಿನಹಡಗಲಿ: ಕಳೆದ ನಾಲ್ಕೈದು ದಿನಗಳಿಂದ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ತಾಲೂಕಿನ ನದಿತೀರದ ಗ್ರಾಮಗಳ ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ಜಲಾವೃತವಾಗಿದೆ.
ಮದಲಗಟ್ಟಿ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತ ನೀರು ಆವರಿಸಿದ್ದು, ದೇಗುಲ ಪ್ರವೇಶ ನಿಷೇಧವಿದ್ದರೂ ಭಕ್ತರು ನದಿನೀರಲ್ಲೆ ದೇವರ ದರ್ಶನ ಪಡೆಯುತ್ತಿದ್ದಾರೆ. ಕುರುವತ್ತಿ ಹಾಗೂ ನದಿ ತೀರದ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನದಿಗೆ ದಿನೇದಿನೆ ಒಳಹರಿವು ಹೆಚ್ಚಾಗಿದ್ದು ಕಬ್ಬು, ಭತ್ತ, ಅಡಕೆ, ಬಾಳೆ, ಜೋಳ, ಮೆಕ್ಕೆಜೋಳ ಹಾಳಾಗಿವೆ. ಪಂಪ್‌ಸೆಟ್‌ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಸಿಂಗಟಾಲೂರು ಬ್ಯಾರೇಜಿಗೆ ಶುಕ್ರವಾರ 3,09,735 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 19 ಗೇಟ್‌ಗಳ ಮೂಲಕ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.