

ವಿಚಾರ ಸಂಕಿರಣದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಎಂ.ಹನುಮಂತಪ್ಪ ಪ್ರತಿಪಾದನೆ
ಹೂವಿನಹಡಗಲಿ: ಎಲ್ಲ ಹವಾಗುಣಕ್ಕೂ ಹೊಂದಿಕೊಳ್ಳುವ ಗೋಡಂಬಿ ಕೃಷಿ ಅಳವಡಿಸಿಕೊಂಡಲ್ಲಿ ರೈತರು ಚಿನ್ನದ ಫಸಲು ಪಡೆಯಬಹುದು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಎಂ.ಹನುಮಂತಪ್ಪ ಹೇಳಿದರು.
ಪಟ್ಟಣದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಕೊಚ್ಚಿನ್‌ನ ಗೋಡಂಬಿ ಮತ್ತು ಕೊಕೊ ಅಭಿವೃದ್ಧಿ ನಿರ್ದೇಶನಾಲಯ ಆಯೋಜಿಸಿದ್ದ ಗೋಡಂಬಿ ಬೆಳೆಯ ಉತ್ಪಾದನಾ ತಾಂತ್ರಿಕತೆಗಳು ಹಾಗೂ ಸಂಸ್ಕರಣೆ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಡಂಬಿಯನ್ನು ಕಡಿಮೆ ಖರ್ಚಿನಲ್ಲಿ ಬೆಳೆದು ಅಧಿಕ ಆದಾಯ ಪಡೆಯಬಹುದು. ಪ್ರಾರಂಭದಲ್ಲಿ ಮೂರು ವರ್ಷ ಉತ್ತಮವಾಗಿ ಬೆಳೆ ನಿರ್ವಹಣೆ ಮಾಡಿದಲ್ಲಿ 30 ರಿಂದ 40 ವರ್ಷ ರೈತರು ನಿಶ್ಚಿತ ಆದಾಯ ಗಳಿಸಬಹುದು. ಎಲ್ಲ ಸಂಸ್ಕೃತಿಗಳ ಜೀವಾಳವಾಗಿರುವ ಕೃಷಿಗೆ ಸರ್ಕಾರಗಳು ಹೆಚ್ಚಿನ ಉತ್ತೇಜನ ನೀಡಿವೆ. ಸರ್ಕಾರ ರಾಜ್ಯದಲ್ಲಿ ಗೋಡಂಬಿ ಬೆಳೆ ನಿರ್ವಹಣೆಗೆ ಹೆಚ್ಚಿನ ನೆರವು ನೀಡುತ್ತಿದ್ದು, ಈ ಭಾಗದ ರೈತರು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕೃಷಿ ಸಂಶೋಧನಾ ಕೇಂದ್ರ ಮಂಜೂರು ಶೀಘ್ರ: ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ತೆರೆಯಲು ಹೂವಿನಹಡಗಲಿ ತಾಲೂಕು ಪ್ರಶಸ್ತವಾಗಿದ್ದು, ಶೀಘ್ರ ಕೇಂದ್ರಗಳು ಮಂಜೂರಾಗಲಿವೆ ಎಂದು ಕುಲಪತಿ ಎಂ.ಹನುಮಂತಪ್ಪ ಹೇಳಿದರು. ಈಗಾಗಲೇ ಕೃಷಿ ವಿಜ್ಞಾನ ಕೇಂದ್ರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೊಯಿಲಾರಗಟ್ಟಿ ಬಳಿ ಲಭ್ಯವಿರುವ ಸರ್ಕಾರಿ ಜಮೀನು, ಮೂಲಸೌಕರ್ಯಗಳನ್ನು ವಿಶ್ವವಿದ್ಯಾಲಯ ತಜ್ಞರ ತಂಡ ಪರಿಶೀಲಿಸಿ ಪೂರಕ ವರದಿ ನೀಡಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಮನಕ್ಕೂ ತರಲಾಗಿದೆ. ಇಲ್ಲಿ ಕೇಂದ್ರ ಪ್ರಾರಂಭವಾದಲ್ಲಿ ಹೊಸ ತಳಿಗಳ ಸಂಶೋಧನೆ, ಬೀಜೋತ್ಪಾದನೆ, ನವೀನ ತಾಂತ್ರಿಕತೆಗಳ ಪರಿಚಯದೊಂದಿಗೆ ಈ ಭಾಗದ ರೈತರಿಗೆ ಸಹಕಾರಿಯಾಗಲಿದೆ ಎಂದರು.
ಗೋಡಂಬಿ ಮತ್ತು ಕೊಕೊ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ವೆಂಕಟೇಶ ಮಾತನಾಡಿ, ಈ ಭಾಗದ ಹವಾಗುಣ ಗೋಡಂಬಿ ಕೃಷಿಗೆ ಸೂಕ್ತವಾಗಿದೆ.ಬರಡು ಭೂಮಿಯಲ್ಲಿ ಗೋಡಂಬಿ ಕೃಷಿ ಅಳವಡಿಸಿ ಬಂಗಾರದ ಫಸಲು ತೆಗೆಯಬಹುದು, ಆದರೆ ಇತರೆ ತೋಟಗಾರಿಕೆ ಬೆಳೆ ಬೆಳೆಯಲು ಸಾಧ್ಯವಿಲ್ಲ.ಗೋಡಂಬಿ ಬೆಳೆ ಅಳವಡಿಸಿಕೊಳ್ಳಲು ಮುಂದೆ ಬರುವ ರೈತರಿಗೆ ಎಲ್ಲ ರೀತಿಯ ನೆರವು ನೀಡಲಿದ್ದೇವೆ ಎಂದು ಹೇಳಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕ ಶಂಕರ್ ಜಾಡರ್, ಸಹಾಯಕ ಕೃಷಿ ನಿರ್ದೇಶಕ ಮಹ್ಮದ್ ಆಶ್ರಫ್, ಗದಗ ಗೋಡಂಬಿ ಬೆಳೆಗಾರ ಎಸ್.ಬಿ.ಕರಿಕಟ್ಟಿ, ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಎಂ.ಸಿದ್ದೇಶ,ಕೃಷಿಕ ಸಮಾಜದ ಅಧ್ಯಕ್ಷ ಪಿ.ವಿ.ಬಸವರಾಜ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಹಾಲೇಶ ಇತರರಿದ್ದರು.