ಫಲಾನುಭವಿಗಳಿಗೆ ಸಿಗದ ವಸತಿ, ನಿವೇಶನ

6adarshkdga1
Published on

ಆದರ್ಶ್ ಅದ್ಕಲೇಗಾರ್ ಮಡಿಕೇರಿ


ಜಿಲ್ಲೆಯ ನಿವೇಶನ ರಹಿತರಿಗೆ ಮತ್ತು ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ವಿಫಲವಾಗಿದ್ದು, ನೈಜ್ಯ ಫಲಾನುಭವಿಗಳಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.


ಕೊಡಗಿನ ಆದಿವಾಸಿಗಳು ಮೂಲಭೂತ ಸೌಕರ್ಯಗಳಿಲ್ಲದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತೋಟದ ಮನೆಯ ಲೈನ್‌ಮನೆಯಲ್ಲಿ ಯಾವುದೇ ಸೌಲಭ್ಯವಿಲ್ಲದೇ ಬದುಕುತ್ತಿದ್ದು, ಕೂಲಿಗೆ ಜೀವನ ನಡೆಸುವ ಸ್ಥಿತಿ ಇದೆ. ದಿಡ್ಡಳ್ಳಿ ಹೋರಾಟ ನಡೆದಾಗ ಸರ್ಕಾರ ರಾಜ್ಯಾದ್ಯಂತ ಜನತೆಯ ಗಮನ ಸೆಳೆಯಲು ಆದಿವಾಸಿ ಜನಾಂಗಗಳ ಸಮಸ್ಯೆಯನ್ನು ಬಗೆಹರಿಸುದಾಗಿ ಘೋಷಿಸಿತ್ತು. ಆದರೆ, ಇಂದಿಗೂ ಸಾವಿರಾರು ಜನರಿಗೆ ವಸತಿ, ನಿವೇಶನ ಸೌಲಭ್ಯವಿಲ್ಲದೇ ಪರದಾಡುತ್ತಿದ್ದಾರೆ.
ಆದಿವಾಸಿ ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ನಿರಂತರ ಅರ್ಜಿಸಲ್ಲಿಸುತ್ತಿದ್ದರೂ ಯಾವುದೇ ಅರ್ಜಿಗೂ ಸರ್ಕಾರ ಉತ್ತರಿಸುತ್ತಿಲ್ಲ. ತಾವು ನಿರ್ಧಿಷ್ಟ ಗ್ರಾಮ ಪಂಚಾಯಿತಿಯ ನಿರ್ದಿಷ್ಠ ಪ್ರದೇಶದ ತೊಟದ ಮನೆಯಲ್ಲಿ ಅಥವಾ ಹಾಡಿಯಲ್ಲಿ ವಾಸಿಸುತ್ತಿದ್ದರೂ ಯಾವುದೇ ವಸತಿ ನೀಡುವ ಕಾರ್ಯವಾಗಿಲ್ಲ.


ಅಕ್ರಮ ಭೂ ಒತ್ತುವರಿ ಮತ್ತು ಪೈಸಾರಿಯನ್ನು ಗುರುತಿಸಿ ನಿವೇಶನರಹಿತರಿಗೆ ನೀಡಬೇಕು. ಇಲ್ಲದಿದ್ದಲ್ಲಿ ನಿವೇಶನ ಸಿಗುವವರೆಗೆ ಹಂತ ಹಂತವಾಗಿ ಹೋರಾಟ ಮಾಡಲಾಗುವುದು ಎಂದು ಸಂಘಟನೆಗಳು ಎಚ್ಚರಿಕೆ ನೀಡುತ್ತಿವೆ. ಆದರೂ, ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಮಾತ್ರ ಬಡ ಜನರಿಗೆ ಮನೆ ಕಲ್ಪಿಸುವಲ್ಲಿ ಮೀನಾಮೇಶ ಎಣಿಸುತ್ತಿದೆ.


ಜಿಲ್ಲೆಯಲ್ಲಿ ೮೦೦೦ ಕ್ಕೂ ಅಧಿಕ ಆದಿವಾಸಿಗಳಿಗೆ ನಿವೇಶನ ಹಾಗೂ ಬದುಕಲು ಸೂರಿಲ್ಲದೇ ಲೈನ್ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಈ ಹಿನ್ನೆಲೆ ವಿವಿಧ ಸಂಘಟನೆಗಳ ಮುಖಂಡರ, ಶಿಕ್ಷಕರ, ಜಿಲ್ಲಾಧಿಕರಿಗಳ ಅಭಿಪ್ರಾಯ ಲೌಡ್‌ಸ್ಪೀಕರ್‌ನಲ್ಲಿ ಅನಾವರಣಗೊಂಡಿದೆ.

ಕಾರ್ಮಿಕರು, ಶೋಷಿತರು, ಶ್ರಮಿಕ ವರ್ಗಕ್ಕೆ ಸರ್ಕಾರಗಳು ಉಚಿತ ನಿವೇಶನಗಳನ್ನು ಕೊಡುತ್ತಿಲ್ಲ. ಲೈನ್ ಮನೆ, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರಿಗೆ ಸ್ವಂತ ಮನೆಯಿಲ್ಲದೆ ಅನಾಥರಂತೆ ಬದುಕುವಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಮತ ಹಾಕಿಸಿಕೊಳ್ಳುತ್ತಾರೆ. ಗೆದ್ದ ಮೇಲೆ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡುತ್ತಾರೆ. ಕಳೆದ ಎರಡು ದಶಕಗಳಿಂದ ನಿವೇಶನಕ್ಕಾಗಿ ಹೋರಾಟ ನಡೆಯುತ್ತಿದೆ. ಶೇ.೭೫ರಷ್ಟು ಜನರಿಗೆ ನಿವೇಶನ ಸಿಕ್ಕಿಲ್ಲ.
ಎಚ್.ಎಂ.ಸೋಮಪ್ಪ, ಜಿಲ್ಲಾಧ್ಯಕ್ಷ, ಎಐಟಿಯುಸಿ ಕೊಡಗು

ಸೋಮವಾರಪೇಟೆ ಪಟ್ಟಣದಲ್ಲಿ ಸುಮಾರು ೩೦೦ ರಷ್ಟು ನಿವೇಶನ ರಹಿತರಿದ್ದಾರೆ. ಬಡ ನಿವೇಶನ ರಹಿತರಿಗೆ ಹಂಚಬೇಕಿದ್ದ ನಿವೇಶನಗಳನ್ನು ಬಹುತೇಕ ಉಳ್ಳವರಿಗೆ ನೀಡಿದ ಕೀರ್ತಿ ಪಟ್ಟಣ ಪಂಚಾಯಿತಿಗೆ ಸಲ್ಲಬೇಕು. ಮಾನವೀಯ ದೃಷ್ಟಿಯಿಂದ ನಿಜವಾದ ಬಡ ಫಲಾನುಭವಿಗಳಿಗೆ ಸಿಗಬೇಕು. ಮುಂದೆ ವಿತರಿಸುವ ನಿವೇಶನಗಳು ಫಲಾನುಭವಿಗಳಿಗೆ ಸಿಗಬೇಕು. ಪಂಚಾಯಿತಿ ನಿಯಮ ಮೀರಿದರೆ, ಪ್ರತಿಭಟನೆ ಎದುರಿಸಬೇಕಾಗುತ್ತದೆ.
ಎಚ್.ಎ.ನಾಗರಾಜ್, ಅಧ್ಯಕ್ಷ, ನಿವೇಶನನ ರಹಿತರ ಹೋರಾಟ ಸಮಿತಿ ಸೋಮವಾರಪೇಟೆ

ಜಿಲ್ಲೆಯಲ್ಲಿ ಖಾಲಿ ಇರುವ ಸರ್ಕಾರಿ ಜಾಗಗಳನ್ನು ಗುರ್ತಿಸಿ ನಿವೇಶನ ರಹಿತರಿಗೆ ಮೊದಲು ನೀಡಬೇಕು. ವಸತಿ ಯೊಜನೆಗಳಿಗೆ ಸರ್ಕಾರ ಅನೇಕ ದಾಖಲಾತಿಗಳನ್ನು ಕೇಳುತ್ತಾರೆ. ಅನೇಕರಿಗೆ ನಿವೇಶನವಿಲ್ಲದೆ ವಸತಿ ಸಿಗುತ್ತಿಲ್ಲ. ಸರ್ಕಾರ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ.
ಕೆ.ಪಿ.ಜಯಕುಮಾರ್, ಶಿಕ್ಷಕರು, ಶನಿವಾರಸಂತೆ

ಲೈನ್ ಮನೆಯಲ್ಲಿರುವ ಸಾವಿರಾರು ನಿರಾಶ್ರಿತರಿಗೆ ಸರ್ಕಾರಿ ಭೂಮಿ ಗುರುತಿಸಿ ಹಂಚಬೇಕು ಎಂಬ ಹೋರಾಟ ನಡೆಸುತ್ತಿದ್ದೇವೆ. ಯಾವ ಪ್ರಯೋಜನ ಕೂಡ ಆಗುತ್ತಿಲ್ಲ. ಸ್ಥಳೀಯವಾಗಿ ಜಾಗ ಹಂಚಿ, ಮನೆ ನಿರ್ಮಾಣಕ್ಕೆ ಸರ್ಕಾರ ಅವಕಾಶ ಮಾಡಿಕೊಡಲಿ.
ಎಚ್.ರಮೇಶ್, ಸಂಚಾಲರು, ಪರಿಶಿಷ್ಟ ಜಾತಿ ಮತ್ತು ಪಂಗಡ ಹಕ್ಕುಗಳ ಹೋರಾಟ ಸಮಿತಿ

ಆಡದಿವಾಸಿಗಳು ಲೈನ್ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಸರ್ಕಾರ ಭೂ ಗುತ್ತಿಗೆ ಜಾರಿ ಮಾಡಿ ಭೂಮಿ ಇರುವವರಿಗೆ ಭೂಮಿ ನೀಡಲು ಮುಂದಾಗಿದೆ. ಬಡವರಿಗೆ ನಿವೇಶನ ನೀಡಲು ಸರ್ಕಾರ ತಯಾರಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಜನರ ಕೂಗು ಸರ್ಕಾರಕ್ಕೆ ಮುಟ್ಟುತ್ತಿಲ್ಲ. ಜಡ್ಡುಗಟ್ಟಿದ ವಾತಾವರಣ ನಿರ್ಮಾಣವಾಗಿದೆ. ಈಗಿನ ಸರ್ಕಾರ ಬಡವರ ಪರವಿಲ್ಲ. ಉಳ್ಳವರ ಸರ್ಕಾರವಾಗಿದೆ.
ಡಿ.ಎಸ್.ನಿರ್ವಾಣಪ್ಪ, ಜಿಲ್ಲಾ ಮುಖಂಡ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ

ಸರ್ಕಾರದ ಪೂರ್ವ ಯೋಜನೆಗಳು ಕ್ರಮ ಬದ್ಧವಾಗಿ ನಡೆಯುತ್ತಿಲ್ಲ. ಮನೆ ನಿರ್ಮಾಣ ಮಾಡುವಂತಹ ಕೇಂದ್ರದ ಯೋಜನೆ ಇದುವರೆಗೆ ಜಾರಿಯಾಗಿಲ್ಲ. ಬೆಲೆ ಏರಿಕೆ ಜತೆಗೆ ಸ್ವತಃ ಜಾಗ ಖರೀದಿ ಮಾಡುವ ಶಕ್ತಿ ಬಡವರಿಗಿಲ್ಲ. ಅಕ್ರಮ ಸಕ್ರಮ ಸಮಿತಿ ಸಭೆ ನಡೆಯುತ್ತಿಲ್ಲ. ಪ್ರತಿಭಟನೆ, ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಮಡಿಕೇರಿ ನಗರದಲ್ಲಿ ೧೮೦೦ ಜನರ ಪಟ್ಟಿ ಮಾಡಿದ್ದರೂ ವಿಲೇವಾರಿ ಆಗುತ್ತಿಲ್ಲ. ಬಡವರ ಸಮಸ್ಯೆಗೆ ಸ್ಪಂಧಿಸುವ ಇಚ್ಚಾಶಕ್ತಿ ಸರ್ಕಾರಕ್ಕಿಲ್ಲ.
ಅಮೀನ್ ಮೊಹಿಸಿನ್, ಸದಸ್ಯರು, ನಗರಸಭೆ

ನಿವೇಶನ ಮತ್ತು ವಸತಿ ರಹಿತ ಕುಟುಂಬಗಳು ಕೊಡಗಿನಲ್ಲಿದೆ. ಪರಿಶಿಷ್ಠ ಜಾತಿ ಮತ್ತು ಪಂಗಡದವರು ಹೆಚ್ಚಾಗಿ ತೊಂದರೆಯಲ್ಲಿದ್ದಾರೆ. ಇಂದಿಗು ಎಲ್ಲೇಂದರಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಳೆ ಗಾಳಿ ಎನ್ನದೆ ಜಿವನ ಸಾಗಿಸುತಿದ್ದಾರೆ. ಸರ್ಕಾರ ಇವರ ಬಗ್ಗೆ ಕಾಳಜಿ ತೊರಬೇಕಾಗಿದೆ.
ಡಿ.ಆರ್.ವೇದಕುಮಾರ್, ಕೊಡ್ಲಿಪೇಟೆ ಹೊಬಳಿ ಕಾರ್ಯದರ್ಶಿ, ಕರ್ನಾಟಕ ರಕ್ಷಣ ವೇದಿಕೆ

ಇದ್ದವರಿಗೆ ವಸತಿ ನಿವೇಸನಗಳು ಸಿಗುತ್ತಿದೆ. ಇಂದಿಗೂ ಸಹ ನನ್ನಂತೆ ಅನೇಕ ಕುಟುಂಬಗಳು ವಸತಿ ನಿವೇಶನವಿಲ್ಲದೆ ದಿನ ತಳ್ಳುವಂತಾಗಿದೆ. ಗ್ರಾಮ ಪಂಚಾಯಿತಿಯಿಂದ ವಸತಿ ನೀಡುವಾಗ ಸರಿಯಾದ ಪಲಾನುಭವಿಗಳನ್ನು ಗುರುತಿಸಿ ವಸತಿ ಸೌಲಭ್ಯ ನೀಡಬೇಕು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
ನಳಿನಿ ನಾಗರಾಜ್, ವಸತಿ ರಹಿತರು, ಶನಿವಾರಸಂತೆ

ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ಮತ್ತು ವಸತಿ ರಹಿತರಿಗೆ ಜಾಗ ಗುರುತಿಸುವ ಕೆಲಸ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಜಾಗ ಗುರುತಿಸಿ ಮಾಹಿತಿ ನೀಡಲಾಗುವುದು.
ಬಿ.ಸಿ.ಸತೀಶ್, ಜಿಲ್ಲಾಧಿಕಾರಿ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net