ವಸತಿ ಶಾಲೆಗಳ ಪ್ರವೇಶಕ್ಕೆ ಸಿಇಟಿ!

0101
Published on

ಬೆಳಗಾವಿ: ಬಡವರು, ಕೂಲಿ ಕಾರ್ಮಿಕರು ಹಾಗೂ ಹಿಂದುಳಿದ ಮಧ್ಯಮ ವರ್ಗದ ಮಕ್ಕಳ ‘ಗುರುಕುಲ’ ಎಂದೇ ಖ್ಯಾತಿ ಪಡೆದಿರುವ ಸರ್ಕಾರದ ಎಲ್ಲ ವಸತಿ ಶಾಲೆಗಳ ಪ್ರವೇಶಕ್ಕೆ ಸಿಇಟಿ ಅಳವಡಿಕೆ ಮಾಡಲಾಗಿದೆ.

ಹಲವು ವರ್ಷಗಳಿಂದ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆಂದು ಪಾಲಕರು, ವಿದ್ಯಾರ್ಥಿಗಳು ಕಚೇರಿಗಳಿಗೆ ಅಲೆದಾಡುವಂತಾಗುತ್ತಿತ್ತು. ಇನ್ನು ಪಾಲಕರು ಅರ್ಜಿ ಹಿಡಿದುಕೊಂಡು ಕಚೇರಿಗಳಿಗೆ ಅಲೆದಾಡಬೇಕಿಲ್ಲ. ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮಾದರಿಯಲ್ಲಿಯೇ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ವ್ಯಾಪ್ತಿಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ.ಬಿ.ಆರ್. ಅಂಬೇಡ್ಕರ್, ಏಕಲವ್ಯ, ವಾಜಪೇಯಿ ಹಾಗೂ ಇಂದಿರಾ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಸಿಇಟಿ ಮೂಲಕ ಆಯ್ಕೆ ನಡೆಯಲಿದೆ.

ಪ್ರವೇಶದಲ್ಲಿ ಪಾರದರ್ಶಕತೆ: ರಾಜ್ಯದಲ್ಲಿ 1,234 ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿದ್ದು, ಶಾಲೆಗೆ ತಲಾ 50ರಂತೆ 61,700 ವಿದ್ಯಾರ್ಥಿಗಳು ಪ್ರತಿವರ್ಷ 6ನೇ ತರಗತಿಗೆ ಪ್ರವೇಶ ಪಡೆಯುತ್ತಿದ್ದಾರೆ. ಆದರೆ, ಈ 61,700 ಸೀಟ್‌ಗಳಿಗೆ 3 ಲಕ್ಷದಷ್ಟು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಈ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವೇಶದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ 2020-21ನೇ ಸಾಲಿನಿಂದಲೇ ಸಿಟಿಇ ಮಾದರಿಯಲ್ಲಿಯೇ ಆನ್‌ಲೈನ್
ವ್ಯವಸ್ಥೆ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆಯ್ಕೆಯೂ ಆನ್‌ಲೈನ್ ವ್ಯವಸ್ಥೆ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ವ್ಯಾಪ್ತಿಯಲ್ಲಿನ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳು ತಮ್ಮ ಸಮೀಪದ ವಸತಿ ಶಾಲೆಗೆ ಹೋಗಿ ಆಲ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಆನ್‌ಲೈನ್ ಮೂಲಕವೇ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ವೇಳೆ ಒಂದು ಜಿಲ್ಲೆಯಲ್ಲಿರುವ ನಿಗದಿತ ಸೀಟುಗಳು ಭರ್ತಿಯಾಗಿದ್ದರೆ ಬೇರೆ ಜಿಲ್ಲೆಗಳಲ್ಲಿ ಖಾಲಿ ಉಳಿದಿರುವ ವಸತಿ ಶಾಲೆಗಳಿಗೆ ಪ್ರವೇಶ ಪಡೆದುಕೊಳ್ಳಬಹುದು. ವಿವಿಧ ಜಿಲ್ಲೆಯ ವಸತಿ ಶಾಲೆಗಳಲ್ಲಿ ಖಾಲಿ ಉಳಿದಿರುವ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಬಹುದು.

2020-21ನೇ ಸಾಲಿನಿಂದ ವಸತಿ ಶಾಲೆಗಳ ಪ್ರವೇಶಕ್ಕೆ ಆನ್‌ಲೈನ್ ವ್ಯವಸ್ಥೆ ಜಾರಿಗೆ ಬರಲಿದೆ. ಶಾಲೆಗಳ ಆಯ್ಕೆ, ಪ್ರವೇಶ ಅರ್ಜಿ, ಫಲಿತಾಂಶ ಸೇರಿ ಎಲ್ಲವೂ ಆನ್‌ಲೈನ್ ಮೂಲಕವೇ ನಡೆಯಲಿದೆ. ಇದೀಗ ಲಾಕ್‌ಡೌನ್‌ನಿಂದಾಗಿ ಎಲ್ಲ ಶಾಲೆಗಳ ಪ್ರವೇಶ ಚಟುವಟಿಕೆಗಳು ಸದ್ಯ ಸ್ಥಗಿತಗೊಂಡಿದೆ.|ರಾಮನಗೌಡ ಕುನ್ನೊಳ್ಳಿ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾಧಿಕಾರಿ

ಈ ಸಾಲಿನಿಂದಲೇ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ಸದ್ಯ ಲಾಕ್‌ಡೌನ್‌ನಿಂದ ಯಾವುದೇ ವಸತಿ ಶಾಲೆಯ ಪ್ರವೇಶ ಪರೀಕ್ಷೆ ಅರ್ಜಿ ಸಲ್ಲಿಕೆ ಆರಂಭವಾಗಿಲ್ಲ. ಆದರೆ, ಲಾಕ್‌ಡೌನ್ ಮೊದಲು ಸುಮಾರು 8 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಸರ್ಕಾರದ ನಿರ್ದೇಶನದ ಮೇರೆಗೆ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ನಡೆಯಲಿದೆ. |ಡಾ.ಉಮಾ ಸಾಲಿಗೌಡರ್ ಜಿಲ್ಲಾ ಜಂಟಿ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ

| ಮಂಜುನಾಥ ಕೋಳಿಗುಡ್ಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net