ಎಚ್‌ಐವಿ ಸೋಂಕಿತರಿಗೆ ನಿವೇಶನ

hiv
Published on

ಉಡುಪಿ: ಜಿಲ್ಲೆಯಲ್ಲಿನ ಎಚ್‌ಐವಿ ಸೋಂಕಿತರಿಗೆ ರಾಜೀವ ಗಾಂಧಿ ವಸತಿ ನಿಗಮದ ಸಹಯೋಗದಲ್ಲಿ ವಸತಿ ಕಲ್ಪಿಸಲು ಅವಕಾಶವಿದ್ದು, ಅವರಿಗೆ ಆದ್ಯತೆಯ ಮೇರೆಗೆ ನಿವೇಶನ ಒದಗಿಸಲು ಸಂಬಂಧಪಟ್ಟ ಇಲಾಖೆಗಳು ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಸೂಚಿಸಿದ್ದಾರೆ. ಸೋಮವಾರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಎಚ್‌ಐವಿ ಸೋಂಕಿತರಿಗೆ ವಿವಿಧ ಇಲಾಖೆಗಳಿಂದ ಸೌಲಭ್ಯ ಒದಗಿಸಿರುವ ಬಗ್ಗೆ ಸಾಮಾಜಿಕ ಸವಲತ್ತುಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 2014-15ರಲ್ಲಿ ನಿಗಮದಿಂದ 162 ಗುರಿ ನೀಡಿದ್ದು, 36 ಮಂದಿಗೆ ಮಾತ್ರ ವಸತಿ ಸೌಲಭ್ಯ ಒದಗಿಸಲಾಗಿದೆ. 2016-17 ರಲ್ಲಿ 20 ಗುರಿ ಇದ್ದು 9 ಮಂದಿಗೆ ಸೌಲಭ್ಯ ಒದಗಿಸಲಾಗಿದೆ, 2017-18 ರಲ್ಲಿ 33 ಗುರಿ ಇದ್ದು 4 ಮಂದಿಗೆ ಸೌಲಭ್ಯ ಒದಗಿಸಲಾಗಿದೆ. ಹೆಚ್ಚು ಗುರಿ ಇದ್ದರೂ ಸಹ ನಿವೇಶನ ಇಲ್ಲದ ಕಾರಣ ಅವರಿಗೆ ವಸತಿ ಸೌಲಭ್ಯ ಒದಗಿಸಲು ತೊಂದರೆಯಾಗಿದೆ. ಆದ್ದರಿಂದ ತಾಪಂ ಕಾರ್ಯನಿರ್ವಹಣಾಧಿಕಾರಿ ಹಗೂ ತಹಸೀಲ್ದಾರರ ಮೂಲಕ ನಿವೇಶನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಇಒ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಧನಶ್ರೀ ಯೋಜನೆಯಡಿ ಮಹಿಳಾ ಅಭಿವೃದ್ಧಿ ನಿಗಮದಿಂದ ಎಚ್‌ಐವಿ ಸೋಂಕಿತ ಮಹಿಳೆಯರಿಗೆ ಸ್ವ-ಉದ್ಯೋಗಕ್ಕಾಗಿ ತರಬೇತಿ ನೀಡಿ ಶೇ. 50 ಸಬ್ಸಿಡಿಯಲ್ಲಿ ಸಾಲ ನೀಡಲಾಗುತ್ತಿದೆ. 2019-20ರಲ್ಲಿ ಈ ಯೋಜನೆಯಡಿ 21 ಗುರಿ ನೀಡಿದ್ದು, 19 ಫಲಾನುಭವಿಗಳಿಗೆ ಸೌಲಭ್ಯ ದೊರೆತಿದೆ ಎಂದು ಸಿಇಒ ತಿಳಿಸಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಶೇಷಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.ಜಿಲ್ಲೆಯಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ 2008ರಿಂದ ಜನವರಿ 2020ರ ವರೆಗೆ ಒಟ್ಟು 4,00,386 ಪ್ರಕರಣಗಳನ್ನು ಪರೀಕ್ಷಿಸಲಾಗಿದ್ದು, 7,752 ಎಚ್‌ಐವಿ ಸೋಂಕಿತ ಪ್ರಕರಣ ಪತ್ತೆಯಾಗಿದೆ. ಗರ್ಭಿಣಿಯರಲ್ಲಿ 245 ಎಚ್‌ಐವಿ ಪಾಸಿಟಿವ್, 203 ಎಚ್‌ಐವಿ ಸೋಂಕಿತ ಮಕ್ಕಳು ಹಾಗೂ 7 ಮಂಗಳಮುಖಿಯರಲ್ಲಿ ಎಚ್‌ಐವಿ ಸೋಂಕು ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರಿಯಾಯಿತಿ ದರದ ಬಸ್ ಪಾಸ್: ಆರ್‌ಟಿಒ ಹಾಗೂ ಕೆನರಾ ಬಸ್ ಮಾಲೀಕರ ಸಂಘದ ಸಹಕಾರದಿಂದ ಜಿಲ್ಲಾಡಳಿತ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳಲ್ಲಿ ಎಚ್‌ಐವಿ ಸೋಂಕಿತರಿಗೆ ಶೇ. 50 ರಿಯಾಯತಿ ದರದ ಬಸ್ ಪಾಸ್ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net