

ಶಿವಮೊಗ್ಗ: ಮುಸ್ಲಿಮರಿಗೆ ವಸತಿ ಮನೆಗಳಲ್ಲಿ ಶೇ.15ರಷ್ಟು ಮೀಸಲಾತಿ ಕೊಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಖಂಡಿಸಿ ರಾಷ್ಟ್ರಭಕ್ತರ ಬಳಗ ಹಾಗೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ರಾಜ್ಯಾದ್ಯಂತ ಸಹಿ ಸಂಗ್ರಹ ಮಾಡಿ, ಜನಾಭಿಪ್ರಾಯವನ್ನು ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಸಚಿವ ಸಂಪುಟದ ತೀರ್ಮಾನದಂತೆ ಮುಸ್ಲಿಮರಿಗೆ ಶೇ.15ರಷ್ಟು ಧರ್ಮಾಧಾರಿತ ವಸತಿ ಮೀಸಲಾತಿ ನೀಡುವ ಪ್ರಸ್ತಾವಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಬಾರದು. ಈ ಸಂಬಂಧ ರಾಜ್ಯಪಾಲರಿಗೆ ಜನಾಭಿಪ್ರಾಯ ಸಂಗ್ರಹದ ವರದಿ ಸಲ್ಲಿಸುವ ಜತೆಗೆ ವಾಸ್ತವಾಂಶವನ್ನು ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಡೀ ರಾಜ್ಯವನ್ನೇ ಮುಸ್ಲಿಮರಿಗೆ ಮಾರಾಟ ಮಾಡಿ ಹೋಗಲು ತೀರ್ಮಾನ ಮಾಡಿದಂತಾಗಿದೆ. ಕಳೆದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಸಾಕಷ್ಟು ಯೋಜನೆ ನೀಡಿದ್ದು, ಮುಸ್ಲಿಮರಿಗೆ ಬರೋಬ್ಬರಿ 1,914 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ಕಳೆದ ಬಾರಿಗಿಂತ ದುಪ್ಪಟ್ಟು ಅನುದಾನ ನೀಡಲಾಗಿದೆ ಎಂದು ದೂರಿದರು.
ಮದರಸಗಳಲ್ಲಿ ಸ್ಕಾಲರ್‌ಶಿಪ್‌ಗೆ ಲೆಕ್ಕವಿಲ್ಲದಂತಾಗಿದೆ. ಶಾದಿಭಾಗ್ಯಕ್ಕೆ ಕೋಟ್ಯಂತರ ಹಣ, ಮುಲ್ಲಾಗಳಿಗೂ ಬೇಕಾಬಿಟ್ಟಿಯಾಗಿ ಹಣ ನೀಡಲಾಗುತ್ತಿದೆ. ಈ ಮೂಲಕ ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದುಳಿದವರನ್ನು ಸಂಪೂರ್ಣ ಕಡೆಗಣನೆ ಮಾಡುತ್ತಿದ್ದಾರೆ. ದೇಶದ ಇತಿಹಾಸದಲ್ಲೇ ಶೇ.15ರಷ್ಟು ಧರ್ಮಾಧಾರಿತ ವಸತಿ ಮೀಸಲಾತಿ ನೀಡಿದ ಉದಾಹರಣೆಗಳೇ ಇಲ್ಲ. ಇದನ್ನೆಲ್ಲ ಗಮನಿಸಿದರೆ ಕಾಂಗ್ರೆಸ್ ಸರ್ಕಾರಕ್ಕಿದು ಖಂಡಿತ ಕೊನೆಗಾಲ ಎಂದರು.
ಪ್ರಮುಖರಾದ ಮಹಾಲಿಂಗ ಶಾಸ್ತ್ರಿ, ಇ.ವಿಶ್ವಾಸ್, ಸಂತೆಕಡೂರು ಸತ್ಯನಾರಾಯಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.