

ಸಂಕೇಶ್ವರ: ರಾಜ್ಯ ಸರ್ಕಾರ ವಿವಿಧ ಯೋಜನೆಯಡಿ ಮಂಜೂರಾತಿ ನೀಡಿರುವ ಗ್ರಾಮೀಣ ಹಾಗೂ ನಗರ ಪ್ರದೇಶದ ಮನೆಗಳ ಕಾರ್ಯಾರಂಭ ಮಾಡಲು ಮಾರ್ಚ್ 10 ಹಾಗೂ 15ರ ಗಡುವು ವಿಧಿಸಿದ್ದು, ಇದನ್ನು ಕೂಡಲೇ ಏಪ್ರಿಲ್ 30ರವರೆಗೆ ವಿಸ್ತರಣೆ ಮಾಡಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಹಾವಳಿಯಿಂದ ಗಡಿಜಿಲ್ಲೆಯ ಜನರು ನಲುಗಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ವಸತಿ ಯೋಜನೆಯಡಿ ಇಂತಹ ಕಟ್ಟುನಿಟ್ಟಿನ ಆದೇಶ ಹೊರಡಿಸಿರುವುದರಿಂದ 2013-14 ರಿಂದ 2017-18ರವರೆಗೆ ಮಂಜೂರು ಆಗಿರುವ ಮನೆಗಳನ್ನು ಆರಂಭಿಸುವುದು ಕಷ್ಟವಾಗಲಿದೆ.
ಈ ಕುರಿತು ಸರ್ಕಾರ ಮರುಪರಿಶೀಲಿಸಿ ಕ್ರಮ ಜರುಗಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶ ಜನರು ತುರ್ತು ಅವಧಿಯಲ್ಲಿ ಕಾಮಗಾರಿ ಆರಂಭಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಅವಧಿ ವಿಸ್ತರಣೆ ಮಾಡುವಂತೆ ಹಲವರು ಮನವಿ ಮಾಡಿಕೊಂಡಿದ್ದಾರೆ. ಆದ್ದರಿಂದ ವಸತಿ ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.