

ಶ್ರವಣ್‌ಕುಮಾರ್ ನಾಳ ಪುತ್ತೂರು
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಫಲಾನುಭವಿಗಳಿಗೆ ವಿವಿಧ ವಸತಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಪುತ್ತೂರಿನ 983 ಮನೆ ನಿರ್ಮಾಣ ಕಾಮಗಾರಿ ಅಧರ್ಕ್ಕೆ ನಿಂತಿವೆ.
ತಾಲೂಕಿನ 41 ಗ್ರಾಮ ಪಂಚಾಯಿತಿಗಳ 983 ಫಲಾನುಭವಿಗಳಿಗೆ ಒಟ್ಟು 1.83 ಕೋಟಿ ರೂ. ಯೋಜನೆಯ ಹಣ ಬಾರದೆ ಕಾಮಗಾರಿ ಅರ್ಧದಲ್ಲೇ ನಿಂತಿದೆ. ವಸತಿ ಯೋಜನೆ ಮನೆಗಳಿಗೆ ಸಂಬಂಧಿಸಿ ಗ್ರಾಪಂ ಅಧಿಕಾರಿಗಳಿಗಾಗಿ ಸರ್ಕಾರದ ವತಿಯಿಂದ ವಿಜಿಲ್ ಆ್ಯಪ್ ಅಭಿವೃದ್ಧಿಪಡಿಸಿದ್ದು, ಈ ಆ್ಯಪ್ ಮೂಲಕ ಮನೆ ನಿರ್ಮಾಣದ ಪ್ರದೇಶದಲ್ಲಿ ಗ್ರಾಮಕರಣಿಕರು, ಪಿಡಿಒ ಹಾಗೂ ಫಲಾನುಭವಿಗಳಿರುವ ಭಾವಚಿತ್ರ ಅಪ್‌ಲೋಡ್ ಮಾಡಬೇಕಾಗಿದೆ. ಆದರೆ ಈ ಆ್ಯಪ್‌ನಲ್ಲಿ ಮೇಲ್ಮಟ್ಟದಿಂದಲೇ ನಿಗಮದ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದೆ ಎಂದು ಬಹಿರಂಗವಾಗಿದೆ.
2017-18ನೇ ಸಾಲಿನಲ್ಲಿ ವಸತಿ ಯೋಜನೆಯಡಿ ತಾಲೂಕಿನಲ್ಲಿ ಪ್ರತಿ ಗ್ರಾಪಂಗೆ ತಲಾ 20ರಂತೆ ಮನೆ ನೀಡಬೇಕು ಎಂಬ ಸುತ್ತೋಲೆ ಬಂದಿತ್ತು. ಈಗ ಈ ಸುತ್ತೋಲೆಯ ತಾಂತ್ರಿಕ ಕಾರಣದಿಂದ ಫಲಾನುಭವಿಗಳಿಗೆ ಮನೆ ನಿರ್ಮಾಣ ಯೋಜನೆಗೆ ತೊಡಕಾಗಿದೆ. ಪುತ್ತೂರು ತಾಲೂಕಿನ 41 ಗ್ರಾಮ ಪಂಚಾಯಿತಿಗಳ ಪೈಕಿ ಅರಿಯಡ್ಕ ಗ್ರಾಪಂ ವ್ಯಾಪ್ತಿಯಲ್ಲಿ 60 ಮನೆ ಹಾಗೂ ಕೊಣಾಜೆ ಗ್ರಾಪಂ ವ್ಯಾಪ್ತಿಯಲ್ಲಿ 5 ಮನೆಗಳು ಹಣ ಬಾರದೆ ಕಾಮಗಾರಿ ಸ್ಥಗಿತಗೊಂಡಿದೆ.
ವಸತಿ ಯೋಜನೆಗಳಲ್ಲಿ ಒಂದಾದ ನೆರೆ ಸಂತ್ರಸ್ತ ಪುನರ್ವಸತಿ ಯೋಜನೆಯಡಿ 47 ಮನೆಗಳನ್ನು ಫಲಾನುಭವಿಗಳಿಗೆ ನೀಡಿದ್ದು, ಎ ಕೆಟಗರಿ ಮನೆಗಳಿಗೆ 8 ಲಕ್ಷ ರೂ., ಬಿ ಕೆಟಗರಿ ಮನೆಗಳಿಗೆ 3 ಲಕ್ಷ ರೂ. ಹಾಗೂ ಸಿ ಕೆಟಗರಿ ಮನೆಗಳಿಗೆ 75 ಸಾವಿರದಂತೆ ಹಣ ಮಂಜೂರು ಮಾಡಲಾಗಿದೆ. ಒಟ್ಟು 36.24 ಲಕ್ಷ ರೂ. ಹಣ ಫಲಾನುಭವಿಗಳಿಗೆ ಮಂಜೂರುಗೊಂಡಿದೆ.
ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ಕಾನೂನು ರೀತಿ ಮನೆ ಕಟ್ಟಿದವರಿಗೆ ಹಣ ಬಿಡುಗಡೆ ಮಾಡಲೇಬೇಕು. ಬಡವರು ಸಾಲ ಮಾಡಿ ಮನೆ ಕಟ್ಟಿರುತ್ತಾರೆ. ವಿಜಿಲ್ ಆ್ಯಪ್ ಅನ್ನು ಇನ್ನು ಮಂಜೂರಾಗುವ ಹೊಸ ಮನೆಗಳಿಗೆ ಮಾತ್ರ ಅನ್ವಯ ಮಾಡಲಿ. ಹಳೇ ಮನೆಗಳಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಬಹುತೇಕ ಗ್ರಾಪಂಗಳಲ್ಲಿ ನಡೆಯುವ ಸಾಮಾನ್ಯ ಸಭೆಗಳಲ್ಲಿ ಈಗಾಗಲೇ ಸರ್ಕಾರವನ್ನು ಆಗ್ರಹಿಸಲಾಗಿದೆ.
ವಸತಿ ಯೋಜನೆಯಡಿ ಬಾಕಿಯಾಗಿರುವ ಮೊತ್ತ ಹಾಗೂ ವಿಜಿಲ್ ಆ್ಯಪ್ ಕುರಿತು ಜಿಲ್ಲಾಮಟ್ಟದಲ್ಲಿ ಸಭೆ ನಡೆದಿದೆ. ಈ ನಿಟ್ಟಿನಲ್ಲಿ ವಸತಿ ಯೋಜನೆಯ ಹಣ ಆದಷ್ಟು ಶೀಘ್ರ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಹಣ ಬಿಡುಗಡೆಯಾಗುವಲ್ಲಿ ವಿಳಂಬವಾಗುತ್ತಿದೆ. ಬಡವರೇ ಫಲಾನುಭವಿಯಾಗಿದ್ದು, ಈ ಯೋಜನೆಯ ಸಂಪೂರ್ಣ ಅನುದಾನ ಶೀಘ್ರ ಪಡೆಯುವಂತಾಗಬೇಕು. ಈ ಮೂಲಕ ಅರ್ಧದಲ್ಲಿ ನಿಂತಿರುವ ಮನೆ ಸಂಪೂರ್ಣಗೊಳ್ಳುವಂತಾಗಬೇಕು. ನವೀನ್ ಭಂಡಾರಿ ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಸರ್ಕಾರದ ಅನುದಾನ ವಿಳಂಬದಿಂದ ಪುತ್ತೂರು ತಾಲೂಕಿನ 983 ವಸತಿ ಕಾಮಗಾರಿಗೆ ತೊಡಕಾಗಿರುವುದು ಗಮನಕ್ಕೆ ಬಂದಿದೆ. ಮುಂದಿನ 15 ದಿನದೊಳಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ವಸತಿ ಯೋಜನೆಯಡಿ ಬಾಕಿಯಾಗಿರುವ ಮೊತ್ತ ಬಿಡುಗಡೆಗೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಂಜೀವ ಮಠಂದೂರು ಪುತ್ತೂರು ಶಾಸಕ