

ಹೂವಿನಹಡಗಲಿ: ಅಧಿಕಾರಿಗಳು ವಸತಿ ನಿಲಯಗಳ ಸುಧಾರಣೆಗೆ ಗಮನ ಹರಿಸಬೇಕು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ತಾಪಂ ರಾಜೀವ್‌ಗಾಂಧಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೆಡಿಪಿ ಮತ್ತು ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಆಹಾರ ಕಳಪೆಯಿಂದ ಕೂಡಿದೆ. ಮಾಂಸಾಹಾರ ಹಾಗೂ ಮೊಟ್ಟೆ, ಬಾಳೆಹಣ್ಣುಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಟೆಂಡರ್‌ದಾರರು ನೀಡುವ ಆಹಾರ ಪದಾರ್ಥಗಳಲ್ಲಿ ನಿಲಯಪಾಲಕರು, ಅಡುಗೆ ತಯಾರಕರೂ ತಮ್ಮ ಪಾಲು ತೆಗೆದುಕೊಂಡು ಮಕ್ಕಳಿಗೆ ನೀಡುತ್ತಿದ್ದಾರೆ ಎಂಬ ಆರೋಪವಿದೆ. ಇನ್ನು ಮುಂದೆ ನಾನು ನಿಲಯಗಳಲ್ಲಿನ ಆಹಾರ ದಾಸ್ತಾನಿನ ಗುಣಮಟ್ಟ ಪ್ರಮಾಣವನ್ನು ಪರಿಶೀಲಿಸಿದ ನಂತರ ಮಕ್ಕಳಿಗೆ ನೀಡಬೇಕು. ಅನಿರೀಕ್ಷಿತ ಭೇಟಿ ನೀಡಿದಾಗ ವ್ಯತ್ಯಾಸ ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು.
ಕೃಷಿ ಇಲಾಖೆ ಸೌಲಭ್ಯಗಳನ್ನು ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡಬೇಕು. ರೈತರ ಪರವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ನನ್ನ ಬೆಂಬಲವಿದೆ. ತಾಲೂಕಿನ ರೈತರಿಗೆ ಸಾವಯವ ಕೃಷಿ ಮಾಡುವಂತೆ ಬೆಂಬಲ ನೀಡಿ ಅವರಿಗೆ ಮಾರುಕಟ್ಟೆ ಒದಗಿಸಬೇಕು. ಅಕ್ರಮವಾಗಿ ಪಡಿತರ ಅಕ್ಕಿ ಖರೀದಿಸುವವರು ಪೊಲೀಸರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಇದೆ.
ಆಹಾರ ಇಲಾಖೆಯವರು ಹೊಂದಾಣಿಕೆ ಮಾಡಿಕೊಂಡಿದ್ದೀರಾ ಎಂದು ಆಹಾರ ನಿರೀಕ್ಷಕ ನಾಗೇಂದ್ರನಾಯ್ಕ ಅವರನ್ನು ಪ್ರಶ್ನಿಸಿದರು.
ಶಾಲೆಗಳಿಗೆ ಪೂರೈಕೆಯಾಗುವ ಬಿಸಿಯೂಟದ ದಾಸ್ತಾನು ಉಗ್ರಾಣಗಳಿಂದ ಬೇರೆಡೆಗೆ ಸಾಗಾಟವಾಗುತ್ತಿದೆ ಎಂಬ ಆರೋಪವಿದ್ದು ಕೂಡಲೇ ಅದನ್ನು ಸರಿಪಡಿಸಬೇಕು. ಗ್ರಾಮೀಣ ಭಾಗದ ಜಾನುವಾರುಗಳಿಗೆ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಹಾಗೂ ಪಶು ಆಸ್ಪತ್ರೆಯಲ್ಲಿ ಔಷಧಗಳನ್ನು ಹೊರಗಡೆ ತರುವಂತೆ ಸೂಚಿಸುತ್ತಿದ್ದಾರೆ. ಆದರೆ ಸರ್ಕಾರದಿಂದ ಬರುವ ಔಷಧ ಎಲ್ಲಿಗೆ ಹೋಗುತ್ತಿದೆ? ತಾಲೂಕಿನ ಗ್ರಾಮೀಣ ಭಾಗದಲ್ಲಿ ಅನಧಿಕೃತ ಕಟ್ಟಡಗಳಿಗೆ ಇ-ಸ್ವತ್ತು ನೀಡಲಾಗಿದೆ.
ಸರ್ಕಾರಿ ಸ್ಥಳಗಳ ರಕ್ಷಣೆ ಆಯಾ ಪಿಡಿಒಗಳ ಜವಾಬ್ದಾರಿ. ನಾನು ಹೋಗಿ ಕೆಲಸ ಮಾಡಬೇಕಾದರೆ ನೀವು ಏಕೆ ಇಲ್ಲಿದ್ದೀರಿ? ತಾಲೂಕಿನಲ್ಲಿ ಆರೋಗ್ಯ ಸೇವೆ ಜನರ ನಂಬಿಕೆ ಕಳೆದುಕೊಳ್ಳುತ್ತಿದೆ. ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಿ ಎಂದು ಶಾಸಕ ಕೃಷ್ಣನಾಯ್ಕ ತಿಳಿಸಿದರು. ಜಿಪಂ ಉಪನಿರ್ದೇಶಕ ತಿಮ್ಮಪ್ಪ, ತಾಪಂ ಇಒ ಪರಮೇಶ್ವರ ಇತರರಿದ್ದರು.