

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ನೊಂದಣಿ ಮಾಡಿಕೊಳ್ಳುವವರು, ಗಣ್ಯರು, ವಿದೇಶದಿಂದ ಆಗಮಿಸುವ ಅತಿಥಿಗಳಿಗೆ 3 ದಿನಗಳ ವಸತಿ ವ್ಯವಸ್ಥೆ ಕಲ್ಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವಸತಿ ಸಮಿತಿ ಅಧ್ಯಕ್ಷರೂ ಆದ ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಸತಿ ಸಮಿತಿ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ವ್ಯಾಪ್ತಿಯ ಎಲ್ಲ ಹೊಟೇಲ್, ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುವ ಕೆಲಸವಾಗಿದೆ ಎಂದು ಮಾಹಿತಿ ನೀಡಿದರು.
ಇದಲ್ಲದೇ ಸರ್ಕಾರಿ ಇಲಾಖೆಗಳ ವ್ಯಾಪ್ತಿಗೆ ಬರುವ ವಸತಿನಿಲಯ ಹಾಗೂ ಖಾಸಗಿ ಸಮುದಾಯ ಭವನಗಳನ್ನು ಸಹ 3 ದಿನ ವಸತಿಗೆ ಕಾಯ್ದಿರಿಸುವ ವ್ಯವಸ್ಥೆ ನಡೆಸಲಾಗುತ್ತಿದೆ. ಸಮುದಾಯ ಭವನ, ಕಲ್ಯಾಣ ಮಂಟಪದಲ್ಲಿ ವಸತಿ ವ್ಯವಸ್ಥೆ ಮಾಡುವ ಸ್ಥಳಗಳಲ್ಲಿ ಅವರಿಗೆ ಮಲಗಲು ಹಾಸಿಗೆಯ ವ್ಯವಸ್ಥೆಯಾಗಬೇಕು. ಇದಲ್ಲದೆ ಅಲ್ಲಿನ ಮೂಲ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಳ್ಳುವವರಿಗೆ ಅವರ ಮೊಬೈಲ್ಗೆ ವಸತಿ ಕಲ್ಪಿಸಿರುವ ಸ್ಥಳದ ವಿವರ ಹಾಗೂ ಅವರು ಸಂಪರ್ಕಿಸಬೇಕಿರುವ ನೋಡಲ್ ಅಧಿಕಾರಿಗಳ ವಿವರ ತಲುಪಿಸುವ ಯೋಜನೆ ಸಹ ಸಿದ್ಧಪಡಿಸಲಾಗುತ್ತಿದೆ. ಇದರಿಂದ ಕೊನೆಯ ಕ್ಷಣದಲ್ಲಿ ಆಗಬಹುದಾದ ಗೊಂದಲಗಳನ್ನು ತಡೆಯಬಹುದು. ಸಮ್ಮೇಳನಕ್ಕೆ ಕಲಾವಿದರು, ಗಣ್ಯರು, ನೋಂದಣಿ ಮಾಡಿಕೊಳ್ಳುವವರು, ವಿದೇಶದಲ್ಲಿ ವಾಸವಿರುವ ಕನ್ನಡಿಗರು ಹಾಗೂ ಹಿರಿಯ ಸಾಹಿತಿಗಳು ಆಗಮಿಸಲಿದ್ದಾರೆ. ಅವರಿಗೆ ಯಾವುದೇ ತೊಂದರೆಯಾಗದಂತೆ ಮೊದಲೇ ಮಾಹಿತಿ ಪಡೆದುಕೊಂಡು ವಸತಿ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರು ವಿವಿಧ ತಂಡ ರಚಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಅಂಗವಿಕಲರ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ಪಣ್ಣೆದೊಡ್ಡಿ, ಖಜಾಂಚಿ ಅಪ್ಪಾಜಪ್ಪ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.