

ಮಂಡ್ಯ: ನಗರದಲ್ಲಿ ಡಿ.20, 21 ಮತ್ತು 22ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಎಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಬೇಕು. ಯಾವುದೇ ಲೋಪವುಂಟಾಗದಂತೆ ಎಚ್ಚರಿಕೆ ವಹಿಸುವಂತೆ ವಸತಿ ಸಮಿತಿ ಅಧ್ಯಕ್ಷರೂ ಆದ ಶಾಸಕ ರವಿಕುಮಾರ್ ಗಣಿಗ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಸತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಸತಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಉಪ ಸಮಿತಿಗಳನ್ನು ರಚಿಸುವುದರ ಜತೆಗೆ ಕಲಾವಿದರು, ವಿದೇಶಿ ಗಣ್ಯರು, ಅತಿಥಿಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಬೇಕು. ವಸತಿ ಸಮಿತಿಗೆ ಎರಡು ಕೋಟಿ ರೂ ಬಜೆಟ್ ನೀಡಿದ್ದು, ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದ್ದಲ್ಲಿ ಉಸ್ತುವಾರಿ ಸಚಿವರು ಮತ್ತು ಸ್ವಾಗತ ಸಮಿತಿಯೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನ ಬಿಡುಗಡೆಗೆ ಪ್ರಯತ್ನ ಮಾಡಲಾಗುವುದು. ಮುಂದಿನ ಸಭೆಯಲ್ಲಿ ನಗರಸಭೆ 35 ವಾರ್ಡ್ ಸದಸ್ಯರನ್ನೂ ಕರೆದು ಚರ್ಚಿಸಲಾಗುವುದು ಎಂದರು.
ವಸತಿ ಸೌಲಭ್ಯಗಳಲ್ಲಿ ಲೋಪವಾಗದಂತೆ ಎಚ್ಚರ ವಹಿಸುವುದು ಹಾಗೂ ಸಮರೋಪಾದಿಯಲ್ಲಿ ಎಲ್ಲರಿಗೂ ವಸತಿ ಕಲ್ಪಿಸುವ ಉದ್ದೇಶದಿಂದ ಉಪ ಸಮಿತಿಗಳನ್ನು ರಚಿಸಲಾಗಿದೆ. ವಸತಿ ಶಾಲೆಗಳ ಸಮಿತಿ, ಹೊಟೇಲ್‌ಗಳ ಸಮಿತಿ, ಸಾರಿಗೆ ಸಮಿತಿ, ಕಲ್ಯಾಣ ಮಂಟಪ ಸಮಿತಿ, ಗಣ್ಯಾತಿ ಗಣ್ಯರ ಸಮಿತಿ, ಕಲಾವಿದರ ಸಮಿತಿ, ಮನೆ ಅತಿಥಿ ಸಮಿತಿ, ವಿದೇಶಿ ಗಣ್ಯರ ಸಮಿತಿ, ನೋಂದಣಿ ಸಮಿತಿ, ಪ್ರತಿನಿಧಿಗಳ ಸಮಿತಿಗಳನ್ನು ರಚಿಸಿ ಒಂದು ವಾರದೊಳಗೆ ಸಭೆಗೆ ತಿಳಿಸುವುದರ ಜೊತೆಗೆ ಆಸಕ್ತಿಯಿಂದ ಕೆಲಸ ಮಾಡುವವರನ್ನು ಆಯ್ಕೆ ಮಾಡುವಂತೆ ಸೂಚಿಸಿದರು.
ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಸಮ್ಮೇಳನವನ್ನು ಎಲ್ಲಾ ಸಮಿತಿಗಳು ಒಟ್ಟುಗೂಡಿ ಯಶಸ್ವಿಗೊಳಿಸುವುದಕ್ಕೆ ತಾವುಗಳು ಸಹಕಾರ ಮಾಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ಖಜಾಂಚಿ ಬಿ.ಎಂ.ಅಪ್ಪಾಜಪ್ಪ, ಮಾಧ್ಯಮ ಸಂಯೋಜಕ ಎಲ್.ಕೃಷ್ಣ, ಅಂಜನಾ, ಪೂರ್ಣಚಂದ್ರ, ಸುನಿಲ್, ಅಶೋಕ್, ಅಭಿಲಾಷ್, ತಾಲೂಕು ಅಧ್ಯಕ್ಷ ಚಂದ್ರಲಿಂಗು, ಸುಜಾತ ಕೃಷ್ಣ ಇತರರಿದ್ದರು.