

ಮಂಡ್ಯ: ಸಮ್ಮೇಳನಕ್ಕೆ ಬರುವ ಅತಿಥಿಗಳನ್ನು ಅತಿಗಣ್ಯರು, ಗಣ್ಯರು, ಆಹ್ವಾನಿತರು, ನೋಂದಾಯಿತ ಸದಸ್ಯರು ಎಂಬ ನಾಲ್ಕು ವಿಭಾಗಗಳಾಗಿ ವಿಂಗಡಿಸಿ ವಸತಿ ಸೌಲಭ್ಯ ಕಲ್ಪಿಸೋಣ ಎಂದು ಶಾಸಕ ರವಿಕುಮಾರ್ ಗಣಿಗ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನ ವಸತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೋಟೆಲ್, ಸಮುದಾಯ ಭವನ, ಹಾಸ್ಟೆಲ್, ರೆಸಾರ್ಟ್ ಪಟ್ಟಿ ತಯಾರಿಸಲಾಗುವುದು. ಈ ಕೆಲಸಕ್ಕಾಗಿ ಪಿಡಿಒ, ಇಒಗಳು ಮತ್ತು ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರನ್ನು ಬಳಸಿಕೊಳ್ಳಲಾಗುವುದು ಎಂದರು.
ಸಮ್ಮೇಳನಕ್ಕೆ ಬಂದವರನ್ನು ’ಮನೆ ಅತಿಥಿ’ಯಾಗಿ ಉಳಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಕರೆ ನೀಡಲಾಗುವುದು. ಸಾಮಾಜಿಕ ಜಾಲತಾಣ ಮತ್ತು ನಗರದಲ್ಲಿ ರ‌್ಯಾಲಿಗಳನ್ನು ನಡೆಸುವ ಮೂಲಕ ಜನತೆಯನ್ನು ಸೆಳೆಯಬೇಕು. ಸರ್ಕಾರಿ ಕಚೇರಿ, ಪೆಟ್ರೋಲ್ ಬಂಕ್ ಮುಂತಾದ ಕಡೆ ಸಮ್ಮೇಳನದ ಲೋಗೋವನ್ನು ಒಳಗೊಂಡ ಫ್ಲೆಕ್ಸ್ಗಳನ್ನು ಶೀಘ್ರವೇ ಅಳವಡಿಸಲಾಗುವುದು. ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಸೂಚಿಸಲಾಗುವುದು. ಶಿಕ್ಷಣ, ಕಂದಾಯ ಇಲಾಖೆ ಮತ್ತು ಉಪ ಸಮಿತಿಯ ಸದಸ್ಯರನ್ನು ಬಳಸಿಕೊಂಡು ಸಾಧಕ ಬಾಧಕಗಳನ್ನು ನೋಡಿಕೊಂಡು ವಸತಿ ಪ್ರದೇಶಗಳನ್ನು ನಿರ್ಧರಿಸಲಾಗುವುದು. ಅದಕ್ಕೂ ಮುನ್ನ ಹೋಟೆಲ್ ಮಾಲೀಕರ, ಸಮುದಾಯ ಭವನಗಳ ಮಾಲೀಕರ ಜತೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.
ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ, ಡಿ.10ರೊಳಗೆ ನೋಂದಾಯಿಸಿಕೊಂಡ ಸದಸ್ಯರಿಗೆ ಮಾತ್ರ ವಸತಿ ಕಲ್ಪಿಸಬಹುದು. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮೈಸೂರು ಮುಂತಾದ ಕಡೆಗಳಲ್ಲಿ ಇರುವ ಹೋಟೆಲ್, ಸಮುದಾಯ ಭವನ, ಹಾಸ್ಟೆಲ್‌ಗಳು, ರೆಸಾರ್ಟ್ ಗುರುತಿಸಲಾಗುವುದು. ಮೂರು ದಿನ ಮುಂಚೆ ವಸತಿಗೆ ನಿಗದಿಪಡಿಸಿದ ಕಟ್ಟಡಗಳನ್ನು ಸಮಿತಿಯ ವಶಕ್ಕೆ ಪಡೆಯಬೇಕು ಎಂದು ಹೇಳಿದರು.
ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಹಾವೇರಿಯಲ್ಲಿ ನಡೆದ ಸಮ್ಮೇಳನದಲ್ಲಿ 10 ಸಾವಿರ ಜನಕ್ಕೆ ವಸತಿ ಕಲ್ಪಿಸಲಾಗಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು. ಕಲಾತಂಡಗಳನ್ನು ಸಮುದಾಯ ಭವನಗಳಲ್ಲಿ ಉಳಿಯಲು ಅವಕಾಶ ಮಾಡಿಕೊಡಬಹುದು ಎಂದರು.
ಸಮಿತಿಯ ಸದಸ್ಯರಾದ ಟಿ.ಎಸ್.ಸತ್ಯಾನಂದ, ಅಪೂರ್ವಚಂದು, ಮುಡಾ ಅಧ್ಯಕ್ಷ ನಯೀಂ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್, ಬೇಲೂರು ಸೋಮಶೇಖರ್, ಸುರೇಶ್, ಎಚ್.ಕೆ.ರುದ್ರಪ್ಪ, ಸತ್ಯಪ್ಪ ಇತರರಿದ್ದರು.