ಸೈಟು ಕೊಡಿಸುವುದಾಗಿ ನಂಬಿಸಿ ಸೆಲೆಬ್ರಿಟಿಗಳಿಗೆ ಪಂಗನಾಮ ಹಾಕಿದ ಖತರ್ನಾಕ್​ ವಂಚಕ!

Site
Published on

ಬೆಂಗಳೂರು: ಹೌಸಿಂಗ್ ಬೋರ್ಡ್ ಸೈಟು ಕೊಡಿಸುವುದಾಗಿ ಸೆಲೆಬ್ರಿಟಿಗಳನ್ನು ನಂಬಿಸಿ ಪಂಗನಾಮ ಹಾಕಿದ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ.

ಹರಿಪ್ರಸಾದ್ ಅಲಿಯಾಸ್ ಶ್ರೀಧರ್ ಬಂಧಿತ ಆರೋಪಿ. ಕನ್ನಡದ ಸಿನಿಮಾ ನಟ ಶರತ್ ಲೋಹಿತಾಶ್ವ ಮತ್ತು ಪ್ರಖ್ಯಾತ ಸಾಹಸ ನಿರ್ದೇಶಕ ರವಿವರ್ಮಗೆ ಶ್ರೀಧರ್​ ವಂಚನೆ ಮಾಡಿದ್ದಾರೆ.

ಹೌಸಿಂಗ್ ಬೋರ್ಡ್​ನಲ್ಲಿ ನಾನೊಬ್ಬ ದೊಡ್ಡ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಶ್ರೀಧರ್, ಸೈಟ್ ಕೊಡಿಸುವುದಾಗಿ ನಕಲಿ‌ ಫಾರಂ ಭರ್ತಿಗೊಳಿಸಿಕೊಂಡಿದ್ದ. ಅಪ್ಲಿಕೇಶನ್ ಶುಲ್ಕವೆಂದು 1.80 ಲಕ್ಷ ರೂ. ಹಣವನ್ನ ಕೇಳಿದ್ದ. ಬಳಿಕ ನಾನೇ ಶುಲ್ಕ ಪಾವತಿಸಿರುತ್ತೇನೆ ನಂತರ ಹಣ ಕೊಡಿ ಎಂದು ಹೇಳಿದ್ದ. ತಮ್ಮ ಹೆಸರಿನಲ್ಲಿ ಹಣ ಪಾವತಿಸಲಾಗಿದೆ ಎಂದು ಮೆಸೆಜ್ ಸಹ ತೋರಿಸಿದ್ದ. ಮೆಸೆಜ್ ನೋಡಿ ವಂಚಕ ಶ್ರೀಧರ್​ಗೆ ಹಣ ನೀಡಿದ್ದರು.

ಇದಾದ ಕೆಲವೇ ದಿನಗಳಲ್ಲಿ ಮೊದಲ ಕಂತು ಎಂದು 6.50 ಲಕ್ಷ ಹಣ ಕೇಳಿದ್ದ. ಈ ಬಾರಿಯು ತಾನೇ ಪಾವತಿಸಿದ್ದೇನೆ ಎಂದು ನಕಲಿ ಮೆಸೆಜ್ ಕಳಿಸಿ ನಂತರ ಹಣ ಪಡೆದಿದ್ದ. ಅನುಮಾನಗೊಂಡು ಹೌಸಿಂಗ್ ಬೋರ್ಡ್​ನಲ್ಲಿ ವಿಚಾರಿಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.

ಶ್ರೀಧರ್​ ವಂಚನೆ ಇದೇ ಮೊದಲಲ್ಲ. ಸಿ.ಕೆ‌. ಅಚ್ಚುಕಟ್ಟು, ಮಡಿವಾಳ, ಕುಮಾರಸ್ವಾಮಿ ಲೇಔಟ್ ಹಾಗೂ ವಿಧಾನಸೌಧದಲ್ಲೂ ಈತನ ವಿರುದ್ಧ ಪ್ರಕರಣಗಳಿವೆ. ಕೆಲ ಪ್ರಕರಣಗಳಲ್ಲಿ‌ ಜಾಮೀನು ಪಡೆದಿದ್ದ. ಖ್ಯಾತನಾಮರನ್ನೇ ಟಾರ್ಗೆಟ್ ಮಾಡುತ್ತಿದ್ದ.

ನಟ ಶರತ್ ಲೋಹಿತಾಶ್ವಗೆ 56 ಲಕ್ಷ ರೂ. ಹಾಗೂ ಸಾಹಸ ನಿರ್ದೇಶಕ ರವಿವರ್ಮಾಗೆ 16 ಲಕ್ಷ ರೂ. ವಂಚಿಸಿದ್ದಾನೆ. ಆನಂದ್ ಗುರೂಜಿ, ಕೆಲ ವೈದ್ಯರು, ವಕೀಲರಿಗೂ ಮೋಸ ಮಾಡಿದ್ದಾನೆ. ಸೈಟ್ ಆಸೆಗೆ ಬಿದ್ದು ಅನೇಕ ಮಂದಿ ಹಣ ಕಳೆದುಕೊಂಡಿದ್ದಾರೆ.

ಇನ್ನು ವಂಚಿಸಿದ ಹಣದಲ್ಲೇ ಶ್ರೀಧರ್ ಬಿಂದಾಸ್ ಲೈಫ್ ನಡೆಸುತ್ತಿದ್ದ. ಸ್ಟಾರ್ ಹೊಟೇಲ್​ಗಳಲ್ಲೇ ವಾಸ್ತವ್ಯ ಹೂಡುತ್ತಿದ್ದ. ಅಲ್ಲದೆ, ಸಿನಿಮಾ ನಿರ್ಮಾಣಕ್ಕೂ ಇಳಿದಿದ್ದ. ನಟ ಗಣೇಶ್ ಸಹೋದರನ ಜತೆ ಸಿನಿಮಾ ನಿರ್ಮಿಸಲು‌ ಹೋಗಿ ಅರ್ಧಕ್ಕೆ ಕೈ ಎತ್ತಿದ್ದ. ತಾನೇ ನಿರ್ದೇಶಿಸಿ, ನಿರ್ಮಿಸಲು ಹೋದ ಕಲಿಯುಗದ ಕಂಸ ಸಿನಿಮಾವೂ ಅರ್ಧಕ್ಕೆ ನಿಂತಿತ್ತು. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net