

ಹುಬ್ಬಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬರ ಶವ ಇಲ್ಲಿಯ ನಂದಗೋಕುಲ ಬಡಾವಣೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದು, ಕೊಲೆ ಆರೋಪ ವ್ಯಕ್ತವಾಗಿದೆ.
ಜಯಶ್ರೀ ಬಡಿಗೇರ (31) ಮೃತರು. ಕಳೆದ ಮೇ 21ರಂದು ಶಿವಾನಂದ ಬಡಿಗೇರ ಎನ್ನುವವರ ಜತೆಗೆ ಜಯಶ್ರೀ ಹಸೆಮಣೆ ಏರಿದ್ದರು. ಗದಗ ಜಿಲ್ಲೆ ಹೊಳೆ ಇಟಗಿ ಗ್ರಾಮ ಜಯಶ್ರೀ ತವರೂರು.
ಶಿವಾನಂದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. 13 ವರ್ಷದಿಂದ ಯುವತಿಯೊಬ್ಬರನ್ನು ಶಿವಾನಂದ ಪ್ರೀತಿಸುತ್ತಿದ್ದ. ಪ್ರೀತಿ ಮುಚ್ಚಿಟ್ಟು ಜಯಶ್ರೀಯನ್ನು ಮದುವೆಯಾಗಿದ್ದ.
‘ಮಾಜಿ ಪ್ರಿಯತಮೆಯು ಜಯಶ್ರೀಗೆ ಈ ವಿಷಯ ತಿಳಿಸಿದಂದಿನಿಂದ ಗಂಡ-ಹೆಂಡತಿ ಮಧ್ಯೆ ಜಗಳವಾಗುತ್ತಿತ್ತು. ಕ್ರೌರ್ಯ ಮೆರೆಯುತ್ತಿದ್ದ ಶಿವಾನಂದ, ಶನಿವಾರ ರಾತ್ರಿ ಜಯಶ್ರೀಯನ್ನು ಕೊಲೆ ಮಾಡಿ ನೇಣು ಹಾಕಿದ್ದಾನೆ. ಸಮಗ್ರ ತನಿಖೆ ನಡೆಸಿ ಶಿವಾನಂದ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ’ ಮೃತಳ ತಂದೆ ಶ್ರೀಕಾಂತಪ್ಪ ಬಡಿಗೇರ, ತಾಯಿ ದೇವಕ್ಕ ಬಡಿಗೇರ ಆಗ್ರಹಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಗೋಕುಲ ರೋಡ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.