ಐದು ಪುಟದ ಡೆತ್‌ನೋಟ್ ಬರೆದಿಟ್ಟು ಗೃಹಿಣಿ ನೇಣಿಗೆ ಶರಣು: ಗಂಡನ ಹಣದ ದುರಾಸೆಗೆ ಬಲಿಯಾಯ್ತಾ ಜೀವ?

hanging
Published on

ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿಬಂದಿದೆ.

ಗ್ರಾಮದ ರಾಜೇಂದ್ರ ಮತ್ತು ಮಂಜುಳಾ ದಂಪತಿಯ ಪುತ್ರಿ ಪ್ರೇಮಕುಮಾರಿ ಮೃತೆ. ಈಕೆಯನ್ನು 2022ರಲ್ಲಿ ಮೈಸೂರಿನ ಎನ್.ಆರ್ ಮೊಹಲ್ಲಾದ ರಾಘವೇಂದ್ರ ಎಂಬುವರಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ಈ ವೇಳೆ ವರದಕ್ಷಿಣೆಯಾಗಿ 150 ಗ್ರಾಂ ಚಿನ್ನ ಮತ್ತು 5 ಲಕ್ಷ ರೂ ನಗದನ್ನು ನೀಡಲಾಗಿತ್ತೆಂದು ಹೇಳಲಾಗಿದೆ. ಇನ್ನು ಮದುವೆಯಾದ 6 ತಿಂಗಳ ಕಾಲ ದಂಪತಿ ಅನ್ಯೋನ್ಯವಾಗಿದ್ದರು.

ಬಳಿಕ ಪತಿ ರಾಘವೇಂದ್ರ ಸೇರಿದಂತೆ ಈತನ ಕುಟುಂಬದವರು ವರದಕ್ಷಿಣೆ ಕೊಡುವಂತೆ ಪ್ರೇಮಕುಮಾರಿಗೆ ಕಿರುಕುಳ ನೀಡುತ್ತಿದ್ದರು. ಒಂದು ವೇಳೆ ವರದಕ್ಷಿಣೆ ತರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರೆಂಬ ಆರೋಪ ಕೇಳಿಬಂದಿದೆ. ಇನ್ನು ಹಲವು ಬಾರಿ ರಾಜಿ ಪಂಚಾಯಿತಿ ನಡೆದರೂ ಪ್ರಯೋಜನವಾಗಿಲ್ಲ. ಈ ನಡುವೆ ಸಮಾಧಾನ ಹೇಳಿ ಪ್ರೇಮಕುಮಾರಿಯನ್ನು ತವರಿನಲ್ಲಿ ಇರಿಸಿಕೊಂಡಿದ್ದರು. ಮಾತ್ರವಲ್ಲದೆ ಹಾಸನದಲ್ಲಿ ಪ್ರಥಮ ವರ್ಷದ ಎಲ್ಎಲ್ಬಿ ವ್ಯಾಸಂಗಕ್ಕೆ ದಾಖಲಾತಿ ಪಡೆದುಕೊಂಡಿದ್ದರು. ಆದರೆ ಅಲ್ಲಿಗೂ ಹೋಗಿ ಕಿರುಕುಳ ನೀಡಿದ್ದಾರೆನ್ನುವ ಆರೋಪವಿದೆ.

ಕಳೆದ ವಾರ ರಾಘವೇಂದ್ರ ಮತ್ತು ಕುಟುಂಬದವರು ಒಂದೆಡೆ ಸೇರಿ ಮಾತಾಡಿಕೊಂಡು ವರದಕ್ಷಿಣೆ ತರದಿದ್ದರೆ ಸುಫಾರಿ ಕೊಟ್ಟು ಕೊಲೆ ಮಾಡಿಸುತ್ತೇವೆಂದು ಹಲವು ಬಾರಿ ಕರೆ ಮಾಡಿ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಬೇಸತ್ತ ಪ್ರೇಮಕುಮಾರಿ ಮಾ.20 ರಂದು ಸಂಜೆ ಮನೆಯ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೂ ಮುನ್ನ 5 ಪುಟದ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಕುಮಾರಿ ತಾಯಿ ಅಳಿಯ ಮತ್ತವರ ಕುಟುಂಬದವರ ವಿರುದ್ಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net