ಪೊಲೀಸರ ಸೋಗಿನಲ್ಲಿ ಗೃಹಿಣಿ ಮೇಲೆ ಅತ್ಯಾಚಾರ!

24 10 2025_BNG_RURAL_PAGE_5B
Published on

ನೆಲಮಂಗಲ : ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡನಹಳ್ಳಿಯಲ್ಲಿ ನಡೆದಿದ್ದ ಗೃಹಿಣಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಮಾದನಾಯನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಗಂಗೊಂಡನಹಳ್ಳಿಯ ಕಾರ್ತಿಕ್​(28), ಗ್ರೇನ್​(26) ಮತ್ತು ಸುಯೋಗ್​(28) ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ಮಿಥುನ್​(30), ಪೃಥ್ವಿ(28) ಹಾಗೂ ನವೀನ್​ (26) ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪೊಲೀಸರೆಂದು ಮನೆಗೆ ನುಗ್ಗಿದ್ದರು: ಗಂಗೊಂಡನಹಳ್ಳಿಯಲ್ಲಿ ಬಂಗಾಳ ಮೂಲದ ಕುಟುಂಬ ವಾಸವಿದ್ದು, ಅ.21ರಂದು ತಡರಾತ್ರಿ ಮನೆಗೆ ನುಗ್ಗಿದ 6 ಆರೋಪಿಗಳು ಮೊದಲಿಗೆ ಪೀಣ್ಯಾ ಠಾಣೆ ಪೊಲೀಸರು ಎಂದು ಪರಿಚಯ ಮಾಡಿಕೊಂಡಿದ್ದರು. ನಿಮ್ಮ ಮನೆಯಲ್ಲಿ ಗಾಂಜಾ ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದೀರಾ? ಎಂದು ಹೆದರಿಸಿ ಬಳಿಕ ಮಾರಕಾಸ್ತ್ರಗಳಿಂದ ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ಮನೆಯಲ್ಲಿದ್ದ ಇಬ್ಬರು ಪುರುಷರನ್ನು ಕಟ್ಟಿಹಾಕಿ, ಮತ್ತೊಬ್ಬ ಮಹಿಳೆಯನ್ನು ಕೊಠಡಿಯಲ್ಲಿ ಕೂಡಿಹಾಕಿದ್ದರು. ಬಳಿಕ ಗೃಹಿಣಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂಬುದು ಪೊಲೀಸ್​ ತನಿಖೆಯಲ್ಲಿ ತಿಳಿದುಬಂದಿದೆ.

ಅತ್ಯಾಚಾರದ ಬಳಿಕ ದರೋಡೆ: ಅತ್ಯಾಚಾರದ ಬಳಿಕ ದುಷ್ಕರ್ಮಿಗಳು ಮನೆಯಲ್ಲಿದ್ದ 2 ಮೊಬೈಲ್​, ಜತೆಗೆ 25 ಸಾವಿರ ನಗದು ದೋಚಿ ಪರಾರಿಯಾಗಿದ್ದರು. ದುರ್ಟನೆ ನಂತದ ಸಂತ್ರಸ್ತೆ ಪೊಲೀಸ್​ ಸಹಾಯ ವಾಣಿಗೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂತ್ರಸ್ತೆ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ವಿಶೇಷ ತಂಡಕ್ಕೆ ಸಿಕ್ಕಿಬಿದ್ದ ದುಷ್ಕರ್ಮಿಗಳು : ಗ್ಯಾಂಗ್​ ರೇಪ್​ ಹಾಗೂ ಡಕಾಯಿತಿ ಪ್ರಕರಣ ದಾಖಲಿಸಿಕೊಂಡ ಮಾದನಾಯನಹಳ್ಳಿ ಠಾಣೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಡಿವೈಎಸ್ಪಿ ಜಗದೀಶ್​ ನೇತೃತ್ವದಲ್ಲಿ 3 ವಿಶೇಷ ತಂಡ ರಚಿಸಿ ಹುಡುಕಾಟ ಆರಂಭಿಸಿದ್ದರು. ಕಾರ್ಯಾಚರಣೆಯಲ್ಲಿ 6 ಮಂದಿ ಆರೋಪಿಗಳ ಪೈಕಿ ಮೂವರು ಸಿಕ್ಕಿಬಿದ್ದಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಸಂತ್ರಸ್ತೆ ವಾಸವಿದ್ದ ಮನೆಯಿಂದ ಸ್ವಲ್ಪ ದೂರದಲ್ಲಿ ವಾಸವಿದ್ದವರು ಎಂಬುದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net