ಹೋಟೆಲ್‌ನಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು

Published on

ಸಾಲಿಗ್ರಾಮ: ಭೇರ್ಯ ಗ್ರಾಮದ ಹೋಟೆಲ್‌ವೊಂದರಲ್ಲಿ ಶನಿವಾರ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಹುಣಸೂರು ತಾಲೂಕಿನ ಬಿಳಿಕೆರೆ ಸಮೀಪದ ಗೆರಸನಹಳ್ಳಿ ಗ್ರಾಮದ ನಿವಾಸಿ ದರ್ಷಿತಾ (21) ಮೃತರು. ಕೇರಳ ಮೂಲದ ಯುವಕನೊಂದಿಗೆ ಮದುವೆಯಾಗಿದ್ದ ಯುವತಿ ಗಂಡನಿಂದ ದೂರವಾಗಿ ಬೆಟ್ಟದಪುರದಲ್ಲಿ ವಾಸವಿದ್ದರು. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಸಿದ್ದರಾಜು(25) ಎಂಬಾತನ ಜತೆ ದೇವಸ್ಥಾನಕ್ಕೆ ಹೋಗುವುದಾಗಿ ಮೈಸೂರು ರಸ್ತೆಯ ಹೊಸ ಬಸ್ ನಿಲ್ದಾಣದ ಮುಂಭಾಗ ಇರುವ ಎಸ್‌ಜಿಆರ್ ರೆಸಿಡೆನ್ಸಿಗೆ ಶನಿವಾರ ಮಧ್ಯಾಹ್ನ ಬಂದು ರೂಂ ಬುಕ್ ಮಾಡಿದ್ದಾರೆ. ನಂತರ ರೂಂನಿಂದ ಹೊರಬಂದ ಸಿದ್ದರಾಜು ಊಟ ತರಲೆಂದು ಹೊರಗಡೆ ತೆರಳಿದ್ದ. ವಾಪಸ್ ಬಂದು ನೋಡಿದಾಗ ರೂಂ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಹೋಟೆಲ್ ಸಿಬ್ಬಂದಿ ಸಹಾಯದಿಂದ ಬಾಗಿಲು ತೆರೆದು ನೋಡಿದಾಗ ಮುಖ ಛಿದ್ರವಾದ ಸ್ಥಿತಿಯಲ್ಲಿ ಗೃಹಿಣಿ ಮೃತದೇಹ ಕಂಡುಬಂದಿದೆ. ರೂಂನಲ್ಲಿ ವಿದ್ಯುತ್ ಶಾಕ್ ತಗುಲಿ ಈ ಘಟನೆ ಸಂಭವಿಸಿರಬಹುದು ಎಂದು ಸಿದ್ದರಾಜು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

ಸ್ಥಳಕ್ಕೆ ಎಸ್‌ಪಿ ವಿಷ್ಣುವರ್ಧನ್, ಡಿವೈಎಸ್‌ಪಿ ಮಲ್ಲಿಕ್, ಸಾಲಿಗ್ರಾಮ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಶಿಕುಮಾರ್, ಕೆ.ಆರ್.ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ನಿಂಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಿಳೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸಿದ್ದರಾಜುನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net