

ಹಲಗೂರು: ರಾಷ್ಟ್ರೀಯ ಹೆದ್ದಾರಿ-209ರ ಹಲಗೂರು ಬೈಪಾಸ್ ರಸ್ತೆಯಲ್ಲಿ ಸೋಮವಾರ ಬೈಕ್‌ಗೆ ಬೊಲೆರೊ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿದ್ದು, ಅವರ ಪುತ್ರ ಗಾಯಗೊಂಡಿದ್ದಾರೆ.
ಗೊಲ್ಲರಳ್ಳಿ ಗ್ರಾಮದ ನಿವಾಸಿ ಜಗದೀಶ್ ಅವರ ಪತ್ನಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಇಂದ್ರಮ್ಮ(32) ಮೃತರು. ಮದುವೆ ಸಮಾರಂಭಕ್ಕೆ ತಮ್ಮ ಪುತ್ರ ರೋಹಿತ್‌ನೊಂದಿಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಬೈಪಾಸ್‌ನಲ್ಲಿ ಕನಕಪುರ ಕಡೆಯಿಂದ ಅತಿ ವೇಗವಾಗಿ ಮಳವಳ್ಳಿ ಕಡೆಗೆ ಹೋಗುತ್ತಿದ್ದ ಬೊಲೆರೊ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಇವರನ್ನು ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದ್ರಮ್ಮ ಮೃತಪಟ್ಟಿದ್ದು, ಗಾಯಗೊಂಡ ರೋಹಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಲಗೂರು ಪೊಲೀಸರು ಕೇಸ್ ದಾಖಲು ಮಾಡಿಕೊಂಡು ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.