ಮದ್ವೆಯಾದ 8 ತಿಂಗಳಲ್ಲಿ ದುರಂತ ಅಂತ್ಯ ಕಂಡ ಗೃಹಿಣಿ: ಪತಿ ಎಸ್ಕೇಪ್​, ಪಾಲಕರ ಗಂಭೀರ ಆರೋಪ!​

Housewife Death 1
Published on

ಬೆಂಗಳೂರು: ಗೃಹಿಣಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ವಿದ್ಯಾರಣ್ಯಪುರದ ರಾಮಚಂದ್ರಾಪುರದಲ್ಲಿ ನಡೆದಿದ್ದು, ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ವನಜಾಕ್ಷಿ (25) ಮೃತ ಗೃಹಿಣಿ. ಪತ್ನಿಯನ್ನು ಹತ್ಯೆಗೈದು ಪತಿ ಎಸ್ಕೇಪ್ ಆಗಿದ್ದಾನೆಂದು ವನಜಾಕ್ಷಿ ಪೋಷಕರು ಆರೋಪಿಸಿದ್ದಾರೆ. ವನಜಾಕ್ಷಿಗೆ 8 ತಿಂಗಳ ಹಿಂದೆ ನಾಗರಾಜ್ ಎಂಬುವರ ಜತೆ ವಿವಾಹ ಮಾಡಿಕೊಡಲಾಗಿತ್ತು.

ನವದಂಪತಿ ಮೂಲತಃ ಮಂಡ್ಯದ ನಾಗಮಂಗಲದವರು. ಇಬ್ಬರು ಬೆಂಗಳೂರಿನ ರಾಮಚಂದ್ರಪುರದಲ್ಲಿ ಬೇಕರಿ ನಡೆಸುತ್ತಿದ್ದರು. ಕರೊನಾ ಹಿನ್ನೆಲೆಯಲ್ಲಿ ಬೇಕರಿ ಬಿಸಿನೆಸ್​ನಲ್ಲಿ ನಷ್ಟವಾಗಿತ್ತು. ಹೀಗಾಗಿ ಪತ್ನಿಗೆ ಹಣ ತರುವಂತೆ ನಾಗರಾಜ್​ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ತವರು ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದೆ ಎಂದು ವನಜಾಕ್ಷಿ ಹೇಳಿದ್ದಳಂತೆ. ಹಣದ ವಿಚಾರವಾಗಿಯೇ ಪತಿ-ಪತ್ನಿ ಮಧ್ಯೆ ಕಳೆದ 6 ತಿಂಗಳಿಂದ ಕಿತ್ತಾಟ ನಡೆದಿತ್ತು. ಈ ಮಧ್ಯೆ ನಿನ್ನೆ ವನಜಾಕ್ಷಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪತಿಯೇ ಕೊಲೆಗೈದು ನೇಣು ಹಾಕಿಕೊಂಡಿರುವ ರೀತಿಯಲ್ಲಿ ಬಿಂಬಿಸಿದ್ದಾನೆಂದು ವನಜಾಕ್ಷಿ ಪಾಲಕರು ಗಂಭೀರ ಆರೋಪ ಮಾಡಿದ್ದಾರೆ. ಘಟನೆ ಬಳಿಕ ಪತಿ ನಾಗರಾಜ್ ಎಸ್ಕೇಪ್ ಆಗಿದ್ದು, ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net