

ಹೊನ್ನಾಳಿ: ಮಾವನನ್ನು ಮನೆ ಬಿಡಿಸಲು ಜ್ಯೋತಿಷಿ ಮೊರೆ ಹೋದ ಸೊಸೆ, ಮಂತ್ರ-ತಂತ್ರದ ವೆಚ್ಚಕ್ಕೆ ಹಣ ಹೊಂದಿಸಲು ಸ್ವಂತ ಮನೆಗೇ ಕನ್ನ ಹಾಕಿ ಜೈಲು ಪಾಲಾದ ಕತೆ ಇದು. ಇದರ ನಿರ್ದೇಶಕಿ, ಪಾತ್ರಧಾರಿ ಹೊನ್ನಾಳಿಯ ವಿನುತಾ. ತನ್ನ ಉದ್ದೇಶ ಈಡೇರಿಸಿಕೊಳ್ಳಲು ದರೋಡೆಯ ಕಟ್ಟುಕತೆ ಹೆಣೆದು ಅದರೊಳಗೆ ತಾವೇ ಸಿಲುಕಿ ಒದ್ದಾಡುತ್ತಿದ್ದಾರೆ.
ಪ್ರಕರಣದ ವಿವರ: ಫೆ.1ರ ಸಂಜೆ ಪಟ್ಟಣದ ಟಿ.ಬಿ.ವೃತ್ತ ಸಮೀಪದ ಮನೆಗೆ ನುಗ್ಗಿದ ಮೂವರು ದುಷ್ಕರ್ವಿುಗಳು ಚಾಕುವಿನಿಂದ ಹೆದರಿಸಿ 170 ಗ್ರಾಂ. ಚಿನ್ನಾಭರಣ ಹಾಗೂ 50 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು ಎಂದು ವಿನುತಾ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ಠಾಣೆ ಸಮೀಪವೇ ಹಾಡಹಗಲೇ ದರೋಡೆ ನಡೆದಿದೆ ಎಂಬ ಕಾರಣಕ್ಕೆ ಪ್ರಕರಣ ಪತ್ತೆಗೆ 10 ಜನರ ತಂಡ ರಚಿಸಲಾಗಿತ್ತು. ತನಿಖೆ ವೇಳೆ ಪ್ರಕರಣ ರೋಚಕ ತಿರುವು ಪಡೆದುಕೊಂಡಿತು. ದೂರು ನೀಡಿದ್ದ ಮಹಿಳೆಯೇ ಇದರಲ್ಲಿ ಭಾಗಿಯಾಗಿದ್ದು, ಸತ್ಯ ಮರೆಮಾಚಲು ಕತೆ ಕಟ್ಟಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿತು. ‘ನಮ್ಮ ಮಾವ ನಮಗೆ ಕಿರುಕುಳ ನೀಡುತ್ತಿದ್ದರು. ಅವರು ಚಿಕ್ಕ ಮಗನ ಮನೆಗೆ ಹೋಗುವಂತಾಗಬೇಕು. ಇದಕ್ಕಾಗಿ ಸಹಾಯ ಮಾಡುವಂತೆ ಜ್ಯೋತಿಷಿ ಸಂಪತ್ ಕುಮಾರ್ ಅವರನ್ನು ಕೇಳಿಕೊಂಡೆ, ಅದಕ್ಕೆ ಅವರು 2.50 ಲಕ್ಷ ರೂಪಾಯಿ ಬೇಡಿಕೆ ಇಟ್ಟರು’ ಎಂದು ವಿನುತಾ ಪೊಲೀಸರಿಗೆ ವಿವರಿಸಿದ್ದಾರೆ. ಮನೆಯಲಿದ್ದ ಒಡವೆಗಳನ್ನು ಜ್ಯೋತಿಷಿಗೆ ಕೊಡುತ್ತ ಬಂದೆ. ಅಮಾವಾಸ್ಯೆ ದಿನ ಸಂಪತ್ ನನಗೆ ಫೋನ್ ಮಾಡಿ ಬಾಕಿ ಹಣ ಕೊಡಿ, ಇಲ್ಲದಿದ್ದರೆ ನಿಮಗೆ ಕೆಟ್ಟದಾಗುತ್ತದೆ ಎಂದು ಹೆದರಿಸಿದ್ದರಿಂದ ಅನಿವಾರ್ಯವಾಗಿ ಮಾವ ಇಟ್ಟಿದ್ದ 50 ಸಾವಿರ ರೂ. ಹಾಗೂ ಬಂಗಾರದ ಆಭರಣ ತೆಗೆದುಕೊಂಡು ಜ್ಯೋತಿಷಿಗೆ ಕೊಟ್ಟೆ ಎಂದು ವಿಚಾರಣೆ ವೇಳೆ ವಿನುತಾ ಒಪ್ಪಿಕೊಂಡಿದ್ದಾರೆ. ವಿನುತಾ ಮತ್ತು ಜ್ಯೋತಿಷಿ ಸಂಪತ್ ಕುಮಾರ್ ಇಬ್ಬರನ್ನೂ ಬಂಧಿಸಿದ್ದಾರೆ.
ಹಾಡಹಗಲೇ ದರೋಡೆ ನಡೆದಿದೆ ಎಂಬ ಸುದ್ದಿ ತಲೆನೋವಾಗಿ ಪರಿಣಮಿಸಿತ್ತು. ಸವಾಲಾಗಿ ಸ್ವೀಕರಿಸಿದ ನಮ್ಮ ಸಿಬ್ಬಂದಿ ನಾಲ್ಕೇ ದಿನದಲ್ಲಿ ಪ್ರಕರಣ ಭೇದಿಸಿದ್ದಾರೆ. | ಸಿ.ಬಿ.ರಿಷ್ಯಂತ್ ಜಿಲ್ಲಾ ಪೊಲೀಸ್ ವರಿಷ್ಠ