

ಗಂಗೊಳ್ಳಿ: ಶುಕ್ರವಾರದಿಂದ ಸುರಿಯುತ್ತಿರುವ ಮುಂಗಾರು ಮಳೆ ಅವಾಂತರವನ್ನೇ ಸೃಷ್ಟಿಸುತ್ತಿದ್ದು, ಹೊಸಾಡು ಗ್ರಾಮದ ಭಗತ್ ನಗರದಲ್ಲಿ ಎರಡು ಮನೆಗಳು ಕುಸಿತ ಭೀತಿಯಲ್ಲಿವೆ.
ಹೊಸಾಡು ಗ್ರಾಮದ ಭಗತ್ ನಗರದ ನಿವಾಸಿ ವಾಸುದೇವ ಖಾರ್ವಿ ಎಂಬುವರ ಮನೆಯ ಹಿಂಭಾಗದ ಕಾಂಪೌಂಡ್ ಗೋಡೆ ಮಳೆ ನೀರಿನ ರಭಸಕ್ಕೆ ಕುಸಿದ ಪರಿಣಾಮ ವಾಸ್ತವ್ಯದ ಮನೆ ಬಿರುಕು ಬಿಟ್ಟು ಕುಸಿತದ ಭೀತಿಯಲ್ಲಿದೆ. ವಾಸುದೇವ ಖಾರ್ವಿ ಮನೆ ಸಮೀಪದಲ್ಲಿರುವ ವೀರೇಶ ಎಂಬುವರ ಮನೆ ಕೂಡ ಅಪಾಯದಂಚಿನಲ್ಲಿದೆ. ಮಳೆ ಮುಂದುವರಿದರೆ ಮನೆ ಸಂಪೂರ್ಣ ನೆಲಸಮವಾಗುವ ಭೀತಿ ಎದುರಾಗಿದೆ. ಹೀಗಾಗಿ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಹೊಸಾಡು ಗ್ರಾಪಂ ಗ್ರಾಮಾಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಹೊಸಾಡು ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.