ದಾನಿಗಳಿಂದ ಮನೆ ನಿರ್ಮಿಸಿ ನಿರ್ಗತಿಕರಿಗೆ ಹಸ್ತಾಂತರ

15 vpt. 3
Published on

ವಿರಾಜಪೇಟೆ: ನಿರ್ಗತಿಕ ಕುಟುಂಬಕ್ಕೆ ದಾನಿಗಳ ನೆರವಿನಿಂದ ಹಿಂದೂ ಮಲಯಾಳಿ ಅಸೋಸಿಯೇಷನ್ ಮತ್ತು ಆರ್ಜಿ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಸೂರು ನಿರ್ಮಿಸಿ ವಿರಾಜಪೇಟೆ ಆರ್ಜಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಹಸ್ತಾಂತರಿಸಲಾಯಿತು.

ವಿರಾಜಪೇಟೆ ತಾಲೂಕು ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1ನೇ ಪೆರುಂಬಾಡಿ ಗ್ರಾಮದ ತರ್ಮೆಕಾಡ್ ಪೈಸಾರಿ 315/1ಪಿ1 ಸರ್ವೆ ಸಂಖ್ಯೆ ಸ್ಥಳದ ನಿವಾಸಿ ವೈ.ಎಂ.ರಾಜು ಕುಟುಂಬಕ್ಕೆ ಸುಸಜ್ಜಿತವಾದ ಮನೆ ನಿರ್ಮಾಣ ಮಾಡಿಕೊಡಲಾಗಿದೆ. ಸಾರ್ವಜನಿಕರು, ದಾನಿಗಳು, ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಮನೆಯ ಕೀಲಿಯನ್ನು ರಾಜು ಅವರಿಗೆ ಹಸ್ತಾಂತರ ಮಾಡಲಾಯಿತು.

ಹೀನಾಯ ಬದುಕು ಅನುಭವಿಸುತ್ತಿದ್ದ ಕುಟುಂಬದ ಮಾಹಿತಿ ಕಲೆಹಾಕಿದ ಗ್ರಾಮ ಪಂಚಾಯಿತಿ ಪಿಡಿಒ ಪ್ರಮೋದ್‌ಕುಮಾರ್ ಅವರು ಗ್ರಾಮ ಪಂಚಾಯಿತಿ ಸರ್ವ ಸದಸ್ಯರ ಸಭೆಯಲ್ಲಿ ಪ್ರಸ್ತಾಪಿಸಿದರು. ಹಿಂದೂ ಮಲಯಾಳಿ ಅಸೋಸಿಯೇಷನ್ ಪದಾಧಿಕಾರಿಗಳ ಗಮನಕ್ಕೆ ತಂದು, ವಿವಿಧ ದಾನಿಗಳ ನೆರವಿನಿಂದ 3 ಲಕ್ಷ ರೂ. ವೆಚ್ಚದಲ್ಲಿ 45 ದಿನಗಳಲ್ಲಿ ಸುಸಜ್ಜಿತವಾದ ಶೀಟ್ ಮನೆ ನಿರ್ಮಾಣ ಮಾಡಲಾಗಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮಾ ರೆಜಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಹಿಂದೂ ಮಲಯಾಳಿ ಸಂಸ್ಥೆಯ ಸದಸ್ಯರು ಹಾಗೂ ದಾನಿಗಳು ರಿಬ್ಬನ್ ಕತ್ತರಿಸುವ ಮೂಲಕ ಮನೆ ಗೃಹಪ್ರವೇಶ ಮಾಡಿದರು. ಮನೆ ಹಸ್ತಾಂತರ ಕುರಿತು ಸದಸ್ಯರಾದ ಕೆ.ಟಿ ಬಶೀರ್ ಮಾತನಾಡಿದರು. ಆರ್ಜಿ ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರು, ಸಿಬ್ಬಂದಿ, ಹಿಂದೂ ಮಲಯಾಳಿ ಅಸೋಸಿಯೇಷನ್ ವಿರಾಜಪೇಟೆಯ ಪದಾಧಿಕಾರಿಗಳು, ಮನೆ ನಿರ್ಮಾಣ ಕಾರ್ಯಕ್ಕೆ ಕೈಜೋಡಸಿದ ದಾನಿಗಳು, ಸ್ಥಳೀಯರು, ಮನೆ ಪಡೆದುಕೊಂಡ ಕುಟುಂಬಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net