

ಕಿಕ್ಕೇರಿ : ಕಳೆದ ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ಮಣ್ಣಿನ ಗೋಡೆ ಮನೆಗಳು ಶೀತವಾಗಿ ಒಂದೊಂದಾಗಿ ಕುಸಿಯಲು ಆರಂಭಿಸಿವೆ.
ಸಮೀಪದ ಕಾರಿಗಾನಹಳ್ಳಿ, ಹೆಗ್ಗಡಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಬಡತನದಿಂದ ಬದುಕು ಸಾಗಿಸುತ್ತಿರುವ ಮಣ್ಣಿನ ಗೋಡೆಯ ಹೆಂಚಿನ ಮನೆಯಲ್ಲಿ ವಾಸಮಾಡುತ್ತಿರುವ ಮನೆಗಳು ಸಾಕಷ್ಟು ಹಾನಿಯಾಗಿವೆ. ಹೋಬಳಿಯ ಕಾರಿಗನಹಳ್ಳಿ ಗ್ರಾಮದ ಲೀಲಾವತಿ ಕಾಂತರಾಜು, ಪುಟ್ಟಮ್ಮ, ಸುನಂದಾಸುರೇಶ್, ಹೆಗ್ಗಡಹಳ್ಳಿ ಶಿವಕುಮಾರ್ ಅವರ ಮನೆಗಳು ಮಳೆಗೆ ಸಂಪೂರ್ಣ ಹಾನಿಯಗಿವೆ.
ಹಾನಿಗೊಳಗಾದ ಮನೆಗಳನ್ನು ವೀಕ್ಷಣೆ ಮಾಡಲು ಘಟನಾ ಸ್ಥಳಕ್ಕೆ ತಹಸೀಲ್ದಾರ್ ಎಸ್.ಯು. ಅಶೋಕ್ ಸೋಮವಾರ ತೆರಳಿ ಪರಿಶೀಲನೆ ಮಾಡಿದರು. ಸರ್ಕಾರದಿಂದ ಹಾನಿಗೊಳಗಾದ ಮನೆಗಳಿಗೆ ಸರ್ಕಾರದ ನಿಯಮಾವಳಿಯಂತೆ ಪ್ರಾಕೃತಿಕ ವಿಕೋಪದಡಿಯಲ್ಲಿ ಸೂಕ್ತ ಪರಿಹಾರ ನೆರವು ಕೊಡಿಸಲಾಗುವುದು ಎಂದರು.
ತಾಲ್ಲೂಕು ರೈತ ಸಂಘ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಕೇವಲ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡುವ ಭರವಸೆ ನೀಡಬಾರದು. ಸರ್ಕಾರದಿಂದ ನೀಡುವ ಪರಿಹಾರ ಸಣ್ಣ ಸಿಮೆಂಟ್ ಮೂಟೆ ಖರೀದಿಸಲು ಸಾಧ್ಯವಾಗಲಾರದು. ಬಡವರಿಗೆ, ನಿರಾಶ್ರಿತರಿಗೆ ಕಣ್ಣು ಒರೆಸುವ ನೆಪ ಮಾಡಬಾರದು. ಹೆಚ್ಚು ಪರಿಹಾರವನ್ನು ತ್ವರಿತವಾಗಿ ನೀಡಬೇಕು ಎಂದು ಅಧಿಕಾರಿಗಳಲ್ಲಿ ಒತ್ತಾಯಿಸಿದರು.
ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಲೆಕ್ಕಾಧಿಕಾರಿ ರಘು, ಗ್ರಾ.ಪಂ. ಮಾಜಿ ಅಧ್ಯಕ್ಷ ಜಯರಾಮ್, ಮುಖಂಡ ಬಸವರಾಜಪ್ಪ, ರವಿಕುಮಾರ್, ನಾಗರಾಜ್, ಗಂಗಾಧರ್, ಸುರೇಶ್ ಮತ್ತಿತರರಿದ್ದರು.