

ಕೊಳ್ಳೇಗಾಲ: ವಿವಿಧೆಡೆ ಕಳ್ಳತನ ಪ್ರಕರಣದ ಆರೋಪಿಯನ್ನು ಡಿವೈಎಸ್ಪಿ ಅಪರಾಧ ಪತ್ತೆ ದಳ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪಟ್ಟಣದ ಮಂಜುನಾಥ ನಗರದ ಶಿವು ಅಲಿಯಾಸ್ ಶಿವ (33) ಬಂಧಿತ ಆರೋಪಿ.
ಪಟ್ಟಣದ ಬಾಪುನಗರದ ಮನೆಯೊಂದರಲ್ಲಿ ಕಳ್ಳತನವಾಗಿತ್ತು. 80 ಸಾವಿರ ನಗದು, 7 ಗ್ರಾಂ ತೂಕದ ಚಿನ್ನಾಭರಣ, ಬೆಳ್ಳಿ ಪದಾರ್ಥ ದೋಚಲಾಗಿತ್ತು. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಆರೋಪಿ ಮತ್ತು ಕಳವಾಗಿರುವ ಮಾಲು ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ .ಕವಿತಾ, ಎಎಸ್ಪಿ ಎಂ.ಎನ್. ಶಶಿಧರ್, ಡಿವೈಎಸ್ಪಿ ಎಂ.ಧರ್ಮೇಂದ್ರ, ವೃತ್ತ ನಿರೀಕ್ಷಕ ಎಂ.ಶಿವಮಾದಯ್ಯ ಅವರ ಮಾರ್ಗದರ್ಶನದಲ್ಲಿ ಬಲೆ ಬೀಸಲಾಗಿತ್ತು.
ಕಳ್ಳತನದಲ್ಲಿ ಭಾಗಿಯಾಗಿದ್ದ ಆರೋಪಿ ಶಿವು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 4 ಕಳ್ಳತನ ಪ್ರಕರಣ ಮತ್ತು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆವೊಂದರಲ್ಲಿ ಕಳ್ಳತನ ಹಾಗೂ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆವೊಂದರ ಕಳ್ಳತನ ಸೇರಿ ಒಟ್ಟು 6 ಪ್ರಕರಣಗಳಲ್ಲಿ ಶಿವು ಭಾಗಿಯಾಗಿರುವುದು ತಿಳಿದುಬಂದಿದೆ.
ಸದ್ಯ ಬಂಧಿತನಿಂದ ಸುಮಾರು 3 ಲಕ್ಷ ರೂ. ಬೆಲೆ ಬಾಳುವ 32.5 ಗ್ರಾಂ ಚಿನ್ನಾಭರಣ, 51 ಗ್ರಾಂ ಬೆಳ್ಳಿಯ ಪದಾರ್ಥ ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಉಮಾವತಿ, ಕೊಳ್ಳೇಗಾಲ ಉಪವಿಭಾಗ ಅಪರಾಧ ಪತ್ತೆ ದಳದ ಎಎಸ್‌ಐ ತಖೀವುಲ್ಲಾ, ಹೆಡ್‌ಕಾನ್ಸ್‌ಟೇಬಲ್ ಎಸ್.ಎನ್.ವೆಂಕಟೇಶ್, ರವಿಕುಮಾರ್, ಕಾನ್ಸ್ ಟೇಬಲ್ ಬಿಳಿಗೌಡ, ಪಿ.ಶಿವಕುಮಾರ, ಸವಿರಾಜು, ಮಾರ್ಷಲ್ ಭಾಗವಹಿಸಿದ್ದರು.