

ಮೂಡಿಗೆರೆ: ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಹಾಗೂ ಅವರ ಪತ್ನಿಗೆ ಕರೊನಾ ಸೋಂಕು ತಗುಲಿದ್ದು, ಚಿಕ್ಕಮಗಳೂರು ಐಸೋಲೇಶನ್ ವಾರ್ಡ್ ಸೇರಿದ್ದಾರೆ.
ಇವರು ಇತ್ತೀಚೆಗೆ ಬೆಂಗಳೂರಿಗೆ ಹೋಗಿಬಂದಿದ್ದರು. ಮೂಡಿಗೆರೆ ತಾಲೂಕಿನ ಘಟ್ಟದಹಳ್ಳಿ ಮನೆಯಲ್ಲಿದ್ದಾಗ ಭಾನುವಾರ ಸಂಜೆ ತಲೆನೋವು ಕಾಣಿಸಿಕೊಂಡಿದೆ. ಸಚಿವ ಸಿ.ಟಿ.ರವಿ ಅವರೊಂದಿಗೆ ಈ ವಿಷಯ ಹಂಚಿಕೊಂಡಾಗ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಿದ್ದರು. ಸಚಿವರ ಸಲಹೆಯಂತೆ ಪರೀಕ್ಷೆ ಮಾಡಿಸಿಕೊಂಡಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಫೇಸ್ಬುಕ್ನಲ್ಲಿ ಈ ವಿಷಯ ಹಂಚಿಕೊಂಡಿರುವ ಪ್ರಾಣೇಶ್, ನಾವು ಚೇತರಿಸಿಕೊಳ್ಳುತ್ತಿದ್ದು ಯಾರೂ ಆತಂಕಪಡುವ ಅಗತ್ಯವಿಲ್ಲ. ಎಲ್ಲರ ಹಾರೈಕೆ ನಮ್ಮ ಮೇಲಿರಲಿ ಎಂದು ಹೇಳಿದ್ದಾರೆ.
ಅವರು ವಾಸವಾಗಿದ್ದ ಘಟ್ಟದಹಳ್ಳಿಯ ಮನೆಯನ್ನು ಅಧಿಕಾರಿಗಳು ಸೀಲ್ಡೌನ್ ಮಾಡಿದ್ದಾರೆ. ಮನೆಯಲ್ಲಿ ಬೇರೆ ಯಾರೂ ವಾಸವಿಲ್ಲದಿರುವುದು ಸಮಾಧಾನ ತಂದಿದ್ದರೂ ಜನಪ್ರತಿನಿಧಿಯಾಗಿರುವ ಕಾರಣ ಪ್ರತಿದಿನ ನೂರಾರು ಜನರ ಸಂಪರ್ಕವಿರುತ್ತದೆ. ಅಲ್ಲದೆ ಕಳೆದ ವಾರ ಶಾಸಕ ಎಂ.ಪಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ತಾಪಂ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದರು. ಅವರ ಪಕ್ಕದಲ್ಲಿ ಹಿರಿಯ ಅಧಿಕಾರಿಗಳು ಕುಳಿತಿದ್ದರು. ಅವರ ಟ್ರಾವೆಲ್ ಹಿಸ್ಟರಿ ತಿಳಿಯಲು ತಾಲೂಕು ಆಡಳಿತ ತಂಡ ರಚಿಸಿದೆ. ಅವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ನಲ್ಲಿರಿಸಲು ಸಿದ್ಧತೆ ನಡೆದಿದೆ.