

ಹರೀಶ್ ಮೋಟುಕಾನ, ಮಂಗಳೂರು
ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ ವಸತಿ ಯೋಜನೆಯಡಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ 46 ಗ್ರಾಮಗಳು ಆಯ್ಕೆಯಾಗಿದ್ದು, 6 ಸಾವಿರಕ್ಕೂ ಅಧಿಕ ವಸತಿ, ನಿವೇಶನ ರಹಿತರಿಗೆ ಸ್ವಂತ ಸೂರು ಹೊಂದುವ ಕನಸು ನನಸಾಗುವ ನಿರೀಕ್ಷೆ ಹೊಂದಲಾಗಿದೆ.
ಸ್ವಾತಂತ್ರೃ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರ 14 ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ ವಸತಿ ಯೋಜನೆಯೂ ಒಂದು. ಸರ್ಕಾರಗಳು ಈ ಹಿಂದೆ ವಸತಿ ಮತ್ತು ನಿವೇಶನ ರಹಿತರಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಆದರೆ ಗ್ರಾಪಂ ವ್ಯಾಪ್ತಿಯ ಅರ್ಹರೆಲ್ಲರಿಗೂ ವಸತಿ ನಿವೇಶನ ಒದಗಿಸುವ ಯೋಜನೆ ಇದೇ ಮೊದಲು. ಅಮೃತ ಗ್ರಾಮೀಣ ವಸತಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ 27 ಹಾಗೂ ಉಡುಪಿಯ 19 ಗ್ರಾಪಂಗಳು ಆಯ್ಕೆಯಾಗಿವೆ.
ಆರು ಸಾವಿರ ಮನೆಗಳು: ದಕ್ಷಿಣ ಕನ್ನಡದಲ್ಲಿ ಆಯ್ಕೆಯಾಗಿರುವ ಗ್ರಾಪಂಗಳಲ್ಲಿ 2,390 ಮಂದಿ ವಸತಿರಹಿತರಿದ್ದಾರೆ. 1908 ಮಂದಿ ವಸತಿ, ನಿವೇಶನ ಎರಡೂ ಇಲ್ಲದವರು. ಉಡುಪಿ ಜಿಲ್ಲೆಯ 19 ಗ್ರಾಪಂಗಳಲ್ಲಿ 2 ಸಾವಿರಕ್ಕೂ ಅಧಿಕ ಮಂದಿಗೆ ವಸತಿ, ನಿವೇಶನ ದೊರೆಯುವ ನಿರೀಕ್ಷೆ ಇದೆ.
ಆಯ್ಕೆಯಾದ ಗ್ರಾಪಂಗಳು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಟಾಡಿ, ಕುಕ್ಕಿಪಾಡಿ, ಪಂಜಿಕಲ್ಲು, ಸರಪಾಡಿ, ಇಡ್ಕಿದು, ಇರಾ, ಬೆಳ್ತಂಗಡಿ ತಾಲೂಕಿನ ಮಡಂತ್ಯಾರು, ಕೊಕ್ಕಡ, ಉಜಿರೆ, ಹೊಸಂಗಡಿ, ಪಡಂಗಡಿ, ಕಡಬ ತಾಲೂಕಿನ ಆಲಂಕಾರು, ಎಡಮಂಗಲ, ಮಂಗಳೂರು ತಾಲೂಕಿನ ಮುನ್ನೂರು, ಐಕಳ, ಮುಚ್ಚೂರು, ಚೇಳಾರು, ಎಕ್ಕಾರು, ಮೂಡುಬಿದಿರೆ ತಾಲೂಕಿನ ಬೆಳುವಾಯಿ, ತೆಂಕ ಮಿಜಾರು, ಪುತ್ತೂರು ತಾಲೂಕಿನ ನಿಡ್ಪಳ್ಳಿ, ಬಲ್ನಾಡು, ಪಾಣಾಜೆ, ಸುಳ್ಯ ತಾಲೂಕಿನ ಬಾಳಿಲ, ಮರ್ಕಂಜ, ಮಂಡೆಕೋಲು ಗ್ರಾಪಂಗಳು ಆಯ್ಕೆಯಾಗಿವೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಂಕರನಾರಾಯಣ, ಸಿದ್ಧಾಪುರ, ಅಂಪಾರು, ನಾಡ, ಬಿಜೂರು, ಕುಂದಾಪುರ ತಾಲೂಕಿನ ಕೋಟೇಶ್ವರ, ಕಾಳಾವರ, ಬೆಳ್ವೆ, ಕೋಟ, ಉಡುಪಿ ತಾಲೂಕಿನ ತೆಂಕನಿಡಿಯೂರು, ನಾಲ್ಕೂರು, 38 ಕಳತ್ತೂರು, ಕಾಪು ತಾಲೂಕಿನ 80 ಬಡಗಬೆಟ್ಟು, ಕಾರ್ಕಳ ತಾಲೂಕಿನ ಕುಕ್ಕುಂದೂರು, ನಿಟ್ಟೆ, ಮುಡಾರು, ಹೆಬ್ರಿ ಹಾಗು ಇತರ ಎರಡು ಸೇರಿದಂತೆ ಒಟ್ಟು 19 ಗ್ರಾಮಗಳು ಯೋಜನೆಗೆ ಆಯ್ಕೆಯಾಗಿವೆ.
ಖಾಸಗಿ ಜಮೀನು ಖರೀದಿ: ಆಯ್ಕೆಯಾಗಿರುವ ಗ್ರಾಪಂಗಳಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದರೆ ಖಾಸಗಿ ಜಮೀನನ್ನು ಸರ್ಕಾರದ ಮಾರ್ಗಸೂಚಿಗಳನ್ವಯ ಖರೀದಿಸಿ ಒದಗಿಸಬೇಕು. 2018ರ ಸಮೀಕ್ಷೆಯಲ್ಲಿ ವಸತಿ ರಹಿತರ ಪಟ್ಟಿ ಪರಿಶೀಲಿಸಿ, ಅರ್ಹರು ಬಿಟ್ಟು ಹೋಗಿದ್ದರೆ ಸೇರ್ಪಡೆ ಮಾಡಿ ಗ್ರಾಮಸಭೆ ಮೂಲಕ ಏಕಕಾಲದಲ್ಲಿ ಆಯ್ಕೆ ಮಾಡಬೇಕು ಎಂದು ವಸತಿ ಇಲಾಖೆ ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 27 ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ. ಬಹುತೇಕ ಸರ್ಕಾರಿ ನಿವೇಶನ ಇರುವ ಗ್ರಾಪಂಗಳನ್ನೇ ಆರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಹಾಗಾಗಿ ಅರ್ಹರೆಲ್ಲರಿಗೂ ವಸತಿ ಮತ್ತು ನಿವೇಶನ ದೊರೆಯಲಿದೆ.
ಡಾ.ಕುಮಾರ್ ಸಿಇಒ, ದ.ಕ ಜಿಪಂ
ಉಡುಪಿ ಜಿಲ್ಲೆಯಲ್ಲಿ 19 ಗ್ರಾಪಂಗಳನ್ನು ಅಮೃತ ವಸತಿ ಯೋಜನೆಗೆ ಆಯ್ಕೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. 2 ಸಾವಿರಕ್ಕೂ ಅಧಿಕ ಮಂದಿ ವಸತಿ ಮತ್ತು ನಿವೇಶನ ರಹಿತರು ಜಿಲ್ಲೆಯಲ್ಲಿದ್ದಾರೆ.
ಡಾ.ನವೀನ್ ಭಟ್ ಸಿಇಒ, ಉಡುಪಿ ಜಿಪಂ